ಮರಳಿ ಪ್ರಯತ್ನಕ್ಕಿಳಿಯುತ್ತಿದ್ದಾರೆ ಕಾಡಿನ ಮಕ್ಕಳು

15rajesh7
Published on

ಚಾಮರಾಜನಗರ: ಕಾಡಿನ ಮಕ್ಕಳು ಮೊದಲ ಪ್ರಯತ್ನದಲ್ಲಿ ಯಶಸ್ಸು ಗಳಿಸಲಾಗದಿದ್ದರೇನಂತೆ ಮರಳಿ ಪ್ರಯತ್ನಕ್ಕಿಳಿಯುತ್ತಿದ್ದಾರೆ..!

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ 26 ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಕಟ್ಟಲಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದ ಇವರನ್ನು ಜಿಲ್ಲಾಡಳಿತ ಗುರುತಿಸಿ ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜುಗೊಳಿಸಿತ್ತು. ಆದರೆ ಪರೀಕ್ಷೆಯಲ್ಲಿ ೇಲ್ ಆಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೂ.7ರಿಂದ 14ವರೆಗೆ ನಡೆಯಲಿರುವ ಪರೀಕ್ಷೆಯನ್ನು ಮತ್ತೆ ಬರೆಯಲಿದ್ದಾರೆ.

ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಸೋಲಿಗರ ಕುಟುಂಬಗಳಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಶಾಲೆ ಬಿಟ್ಟಿದ್ದ ಮಕ್ಕಳನ್ನು ಜಿಲ್ಲಾಡಳಿತ ಗುರುತಿಸಿತ್ತು. ಇವರಲ್ಲಿ ಒಟ್ಟು 28 ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಸಲಾಗಿತ್ತು. 3 ತಿಂಗಳು ವಿಶೇಷ ಪುನಶ್ಚೇತನ ಶಿಬಿರ ನಡೆಸಿ ಪರೀಕ್ಷೆಗೆ ಸಿದ್ಧಗೊಳಿಸಲಾಗಿತ್ತು. ಪರೀಕ್ಷೆ ಬರೆದಿದ್ದ 28 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಉತ್ತೀರ್ಣರಾದರು. ಅನುತ್ತೀರ್ಣರಾಗಿರುವ ಉಳಿದ 26 ವಿದ್ಯಾರ್ಥಿಗಳು ಈಗ ಮರಳಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾಡಳಿತ ಇವರ ಮೇಲೆ ಮರಳಿ ಕಾಳಜಿ ವಹಿಸಿ ಪರೀಕ್ಷೆಗೆ ಸಜ್ಜುಗೊಳಸಲಿದೆ.

ಮತ್ತೆ ವಿಶೇಷ ತರಬೇತಿ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಜೂ.7ರಿಂದ 14ವರೆಗೆ ನಡೆಯುವ ಪರೀಕ್ಷೆಯನ್ನು ಬರೆಯಬಹುದು. ಇದಕ್ಕಾಗಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಚಾಮರಾಜನಗರ-24, ಹನೂರು-19, ಗುಂಡ್ಲುಪೇಟೆ-18, ಕೊಳ್ಳೇಗಾಲ-9, ಯಳಂದೂರಿನ 4 ಒಟ್ಟು 74 ಶಾಲೆಗಳನ್ನು ಗುರುತಿಸಿದೆ. ಈ ವಿದ್ಯಾರ್ಥಿಗಳಿಗೆ ನೀಡುವ ವಿಶೇಷ ತರಬೇತಿಯಲ್ಲಿ ಸೋಲಿಗರ ವಿದ್ಯಾರ್ಥಿಗಳನ್ನೂ ಸಜ್ಜುಗೊಳಿಸಲಾಗುತ್ತಿದೆ.
ಈ ಪರೀಕ್ಷೆಗೂ ಮುನ್ನ ಸೋಲಿಗ ವಿದ್ಯಾರ್ಥಿಗಳಿಗೆ ತಾಲೂಕಿನ ಹರದನಹಳ್ಳಿಯ ವಸತಿ ಶಾಲೆಯಲ್ಲಿ ಮೂರು ತಿಂಗಳು ವಿಶೇಷ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಹತ್ವದ ಕಾರ್ಯ ನಡೆದಿತ್ತು. ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದವರು, ಮನೆಯಲ್ಲಿದ್ದವರು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಇವರಲ್ಲಿ ಶೈಕ್ಷಣಿಕ ಮನೋಭಾವ ಮೂಡಿಸಿ ಪರೀಕ್ಷೆಗೆ ತಯಾರುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳನ್ನು ಶಾಲಾ ವಾತಾವರಣಕ್ಕೆ ಒಗ್ಗಿಸಲು ಸಿನಿಮಾ ತೋರಿಸುವುದು, ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಕ್ರೀಡಾಕೂಟ ಆಯೋಜಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡಲಾಗಿತ್ತು. ಶಿಕ್ಷಣ ಇಲಾಖೆಯ 16 ಶಿಕ್ಷಕರು ಪಾಠ ಮಾಡಿದರು. ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ನೀಡಿ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಈ ಸಲ ಸೋಲಿಗ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವ ಇತರ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.

ಹೆಚ್ಚಿಸುವ ಸವಾಲು
ಎಸ್ಸೆಸ್ಸೆಲ್ಸಿ ಪರೀಕ್ಷೆ ಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆ ಕುಸಿತ ಕಂಡಿದೆ. ಕಳೆದ ವರ್ಷ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದ ಚಾಮರಾಜನಗರ ಈ ಸಲ 24ಕ್ಕೆ ಇಳಿದಿದೆ. 2023ರಲ್ಲಿ ಒಟ್ಟು 11,146 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದರು. 10,468 ವಿದ್ಯಾರ್ಥಿಗಳು ಉತ್ತೀರ್ಣರಾದರು. ಒಟ್ಟು ಶೇ.93.92ರಷ್ಟು ಲಿತಾಂಶ ಬಂದಿತ್ತು. ಈ ಸಲ 11,239 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದರು. ಇವರಲ್ಲಿ 7300 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.73ರಷ್ಟು ಲಿತಾಂಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪರೀಕ್ಷೆ ಬರೆಸಿ ಲಿತಾಂಶದಲ್ಲಿ ಸುಧಾರಣೆ ಕಾಣಬೇಕಾದ ಸವಾಲು ಶಿಕ್ಷಣ ಇಲಾಖೆ ಮುಂದಿದೆ.

ಕೂಲಿ ಮಾಡುವುದೇ ಜೀವನ…
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 28 ಸೋಲಿಗರ ಮಕ್ಕಳು ಶಾಲೆ ಬಿಟ್ಟಿದ್ದವರು. ಇವರಲ್ಲಿ 7 ಹೆಣ್ಣು ಮಕ್ಕಳು, 21 ಗಂಡು ಮಕ್ಕಳು ಇದ್ದರು. ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದ ರಾಜೇಶ್ ಮತ್ತು ಹನೂರಿನ ಕಾನಮೋಳೆದೊಡ್ಡಿಯ ಪ್ರಶಾಂತ ಮಾತ್ರ ಪಾಸ್ ಆಗಿದ್ದಾರೆ. ಇವರೂ ಸೇರಿ ಅನುತ್ತೀರ್ಣರಾಗಿರುವ ಮಕ್ಕಳಿಗೆ ಕೂಲಿ ಮಾಡುವುದೇ ಜೀವನ. ಪರೀಕ್ಷೆಯಲ್ಲಿ ಪಾಸ್ ಆಗಿರುವ ಇಬ್ಬರಿಗೆ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಕನಸು ಚಿಗುರಿದೆ. ಇವರಂತೆಯೇ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೂ ಶಿಕ್ಷಣವೇ ತಳಪಾಯವಾಗಬೇಕಾದರೆ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಹತ್ವದ್ದಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೋಲಿಗ ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಇವರಿಗೆ ಮತ್ತೆ ಪರೀಕ್ಷೆ ಬರೆಸಲು ಜೂನ್ ಮೊದಲ ವಾರದಲ್ಲಿ ಪರೀಕ್ಷೆ-1 ಇದೆ. ಇವರನ್ನು ಪರೀಕ್ಷೆಗೆ ನೋಂದಣಿ ಮಾಡಿಸುತ್ತೇವೆ. ಅನುತ್ತೀರ್ಣರಾಗಿರುವ ಬೇರೆ ಮಕ್ಕಳಿಗೂ 43 ಸೆಂಟರ್‌ಗಳಲ್ಲಿ ವಿಶೇಷ ತರಗತಿ ಮಾಡುತ್ತಿದ್ದೇವೆ. ಇವರನ್ನೂ ಅಲ್ಲಿಗೆ ಸೇರಿಸುತ್ತೇವೆ. ಶೇ.100ರಷ್ಟು ಲಿತಾಂಶ ಬಂದಿರುವ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ತೆಗೆದುಕೊಂಡು ಶನಿವಾರ ಮತ್ತು ಭಾನುವಾರವೂ ಸೇರಿದಂತೆ ತರಬೇತಿ ನೀಡುತ್ತೇವೆ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ ನಾನು 7 ವರ್ಷಗಳ ಹಿಂದೆ 5ನೇ ತರಗತಿ ಓದುತ್ತಿದ್ದಾಗ ಶಾಲೆ ಬಿಟ್ಟಿದ್ದೆ. ಇತ್ತೀಚೆಗೆ ಅಧಿಕಾರಿಗಳನ್ನು ನನ್ನನ್ನು ಗುರುತಿಸಿ ಮೂರು ತಿಂಗಳು ಪಾಠ-ಪ್ರವಚನ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿಸಿದರು. ಎಷ್ಟೋ ವರ್ಷಗಳ ಬಳಿಕ ಮರಳಿ ಶಿಕ್ಷಣ ಪಡೆಯುವಾಗ ಏಕಾಗ್ರತೆ ಕಾಡಿತು. ಸೀಮಿತ ಅವಧಿಯಲ್ಲಿ ಕಲಿಯಬೇಕಾದ ಸವಾಲು ಇತ್ತು. ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ನನಗೆ ಓದುವ ಆಸಕ್ತಿ ಇರುವುದರಿಂದ ಮತ್ತೆ ಪರೀಕ್ಷೆ ಬರೆಯುತ್ತೇನೆ. ಹಿಂದಿನ ಪರೀಕ್ಷೆ ವೇಳೆಯಲ್ಲಿ ಅಧಿಕಾರಿಗಳಿಂದ ಸಿಕ್ಕಿದ್ದ ನೆರವು, ಶಿಕ್ಷಕರ ಮಾರ್ಗದರ್ಶನವನ್ನು ಈ ಸಲವೂ ಪಡೆದುಕೊಳ್ಳಲು ಬಯಸುತ್ತೇನೆ. ಸಿದ್ದರಾಜು, ಬೂದಿಪಡಗ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net