ಗುಂಡ್ಲುಪೇಟೆ: ಕಳೆದ ಕೆಲವು ದಿನಗಳಿಂದ ತಾಲೂಕಿಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ತೀವ್ರ ಅಡಚಣೆಯಾಗಿದೆ.
ಯುಗಾದಿ ಹಬ್ಬದ ವೇಳೆ ಅಂದರೆ ಮಾರ್ಚ್ ಅಂತ್ಯದಲ್ಲಿ ಪೂರ್ವ ಮುಂಗಾರು ಮಳೆ ಬೀಳುವ ನಿರೀಕ್ಷೆಯಲ್ಲಿ ರೈತರು ಜಮೀನುಗಳಿಗೆ ಗೊಬ್ಬರ ಹೂಡಿ ಉಳುಮೆ ಮಾಡಿ, ಬಿತ್ತನೆಗೆ ಅಣಿಗೊಳಿಸಿಕೊಂಡು ಮಳೆಗಾಗಿ ಕಾದಿದ್ದರು. ಆದರೆ ಸಕಾಲದಲ್ಲಿ ಮಳೆ ಬೀಳದ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿತ್ತು.
ಈಗ ಮೇ ಮೊದಲ ವಾರದಲ್ಲಿ ಅಲ್ಲಲ್ಲಿ ಬೀಳಲಾರಂಭಿಸಿದ್ದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದರು. ಆದರೆ ಕಳೆದ ವಾರದಿಂದ ಎಡೆಬಿಡದೆ ಮಳೆ ಬೀಳುತ್ತಿರುವುದರಿಂದ ಸೂರ್ಯಕಾಂತಿ, ಜೋಳ, ಮುಸುಕಿನ ಜೋಳ ಹಾಗೂ ಅರಿಶಿಣವನ್ನು ನಾಟಿ ಮಾಡಲು ಅವಕಾಶ ನೀಡುತ್ತಿಲ್ಲ.
ಇದರಿಂದ ತಾಲೂಕಿನಲ್ಲಿ ಕೇವಲ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ. 10,200 ಹೆಕ್ಟೇರ್ ಸೂರ್ಯಕಾಂತಿ, 4,800 ಹೆಕ್ಟೇರ್ ಜೋಳ, 600 ಹೆಕ್ಟೇರ್ ನೆಲಗಡಲೆ, 250 ಹೆಕ್ಟೇರ್ ಅಲಸಂದೆ, 100 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ಉದ್ದು, ಹೆಸರು ಬಿತ್ತನೆ ಮಾಡಲಾಗಿದ್ದು, ಇನ್ನೂ 12 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಬಾಕಿ ಉಳಿದಿದೆ.
ಈ ಬಾರಿ ಮಳೆ ವಿಳಂಬವಾಗುವ ಜತೆಗೆ ನಿರಂತರವಾಗಿ ಬೀಳುತ್ತಿರುವುದರಿಂದ ಅರ್ಧಕ್ಕಿಂತಲೂ ಹೆಚ್ಚಿನ ರೈತರು ಅರಿಶಿಣ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗಿತ್ತು. ಈ ಬಾರಿ ಬೆಲೆ ಹೆಚ್ಚಾಗಿದ್ದರಿಂದ ಶೇ.15ರಿಂದ 20 ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ನಿರೀಕ್ಷೆಯಿದೆ.ಎಸ್.ಎಂ.ನಾಗಾರ್ಜುನ ಕುಮಾರ್, ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಮೇ ತಿಂಗಳಿನಲ್ಲಿ ವಾಡಿಕೆ ಮಳೆ 55 ಮಿ.ಮೀ. ಇದ್ದರೆ ಈ ಬಾರಿ 117 ಮಿ.ಮೀ. ಬಿದ್ದಿದೆ. ಇದರಿಂದ ಇನ್ನೂ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಮುಸುಕಿನ ಜೋಳ, ನೆಲಗಡಲೆ ಮುಂತಾದ ಬಿತ್ತನೆ ಕಾರ್ಯ ವಿಳಂಬವಾಗಿದೆ.ಕಿರಣ್‌ಕುಮಾರ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುಂಡ್ಲುಪೇಟೆ.