ಶ್ರೀರಾಮನ ಪ್ರತಿರೂಪದ ಗಣಪತಿ

03rajesh2
Published on

ಚಾಮರಾಜನಗರ: ಶ್ರೀರಾಮನ ಪ್ರತಿರೂಪದಂತಿರುವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಶ್ರೀವಿದ್ಯಾ ಗಣಪತಿ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈವಿಧ್ಯಮಯವಾದ ಬೃಹತ್ ಗಾತ್ರದ ಗಣಪತಿ ಪ್ರತಿಷ್ಠಾಪನೆ ಮಾಡಿ, ಹಲವು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ಕೂಡ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಹಿಂದೂಗಳ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ರಕ್ಷಕನಂತೆ ನಿಂತಿರುವ, ಶ್ರೀರಾಮನ ಪ್ರತಿರೂಪದಂತೆ ಇರುವ ಸುಮಾರು 7 ಅಡಿ ಎತ್ತರದ ಬೃಹತ್ ಮಣ್ಣಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಶ್ರೀವಿದ್ಯಾ ಗಣಪತಿ ಮಂಡಳಿಗೆ ಸುಮಾರು 62 ವರ್ಷಗಳ ಇತಿಹಾಸವಿದ್ದು, 1962 ರಿಂದಲೂ ಅದ್ಧೂರಿಯಾಗಿ ಗಣೇಶೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಗರದ ಎಲ್ಲಾ ಕೋಮಿನ ಜನರು ಈ ಉತ್ಸವದಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಅದರಂತೆ ಈಗಾಗಲೇ ಶ್ರೀವಿದ್ಯಾ ಗಣಪತಿಯ 62ನೇ ವರ್ಷದ ಪದಾಧಿಕಾರಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಈ ಬಾರಿಯು ಬಹಳ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಶ್ರೀವಿದ್ಯಾ ಗಣಪತಿ ಮಂಡಳಿಯ ಅಧ್ಯಕ್ಷ ಸುಂದರ್ ರಾಜ್ ವಿಜಯವಾಣಿ ಜತೆಗೆ ಮಾತನಾಡಿ ಮಾಹಿತಿ ನೀಡಿದರು.

ಶ್ರೀರಾಮನ ಪ್ರತಿರೂಪದ ಗಣಪತಿ:
ಹಿಂದೂಗಳ ಪುಣ್ಯ ಭೂಮಿಯಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಕೋಟ್ಯಾಂತರ ಭಾರತೀಯರ ಕನಸಾಗಿತ್ತು. ಅದರಂತೆ ಜ.22 ರಂದು ಶ್ರೀರಾಮನ ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಆವೈಭವವನ್ನು ಮರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರೀರಾಮ ಮಂದಿರದ ಜತೆಗೆ ಶ್ರೀರಾಮನು ನಿಂತಿರುವ ರೂಪದಲ್ಲೇ ಗಣೇಶನ 7 ಅಡಿ ಮಣ್ಣಿನ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕೂ ಕೈಗಳನ್ನು ಒಳಗೊಂಡಿರುವ ಗಣೇಶನ ಮೂರ್ತಿಯ ಮುಂದೆ ಮಂಡಿಯೂರಿ ಕುಳಿತಿರುವ ಶ್ರೀಆಂಜನೇಯನ ರೂಪದಲ್ಲೇ ಇಲಿಯನ್ನು ಚಿತ್ರಿಸಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರದ ವೈಭವವನ್ನು ಈ ಬಾರಿಯ ಗಣೇಶನ ಪ್ರತಿಮೆಯಲ್ಲಿ ಕಟ್ಟಿಕೊಡಲಾಗಿದೆ. ಬಹಳ ಆಕರ್ಷಕವಾಗಿರುವ ಗಣೇಶನ ಪ್ರತಿಮೆ ಈಗಾಗಲೇ ಸಿದ್ಧವಾಗಿದ್ದು, ಬಣ್ಣದ ಲೇಪನ ಮಾಡುವುದಷ್ಟೇ ಬಾಕಿ ಇದೆ. ಒಟ್ಟಾರೆಯಾಗಿ ಈ ಬಾರಿಯ ಗಣೇಶೋತ್ಸವ ಶ್ರೀರಾಮ ಮತ್ತು ಹನುಮನ ಉತ್ಸವವೂ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ವಿದ್ಯಾಗಣಪತಿಯ ಇತಿಹಾಸ:
ಪ್ರತಿವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಶ್ರೀವಿದ್ಯಾ ಗಣಪತಿ ಮಂಡಳಿಗೆ 62 ವರ್ಷಗಳ ಇತಿಹಾಸವಿದೆ. 1962 ರಿಂದಲೂ ನಗರದ ರಥದ ಬೀದಿಯಲ್ಲಿ ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಗಣೇಶೋತ್ಸವವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. 70ರ ದಶಕದಲ್ಲಿ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ವಿವಾದ ಉಂಟಾಗಿ, ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಅದು ಸುಪ್ರಿಂಕೋರ್ಟ್ ತನಕ ತಲುಪಿ, ಕೊನೆಗೆ ತೀರ್ಪು ಮಂಡಳಿ ಪರವಾಗಿಯೇ ಬಂದಿತ್ತು. ಬಳಿಕ ನಡೆದ ವಿಸರ್ಜನಾ ಮಹೋತ್ಸವದ ವೇಳೆ ಕೋಮುಘರ್ಷಣೆ ಕೂಡ ಸಂಭವಿಸಿತ್ತು. ಅಲ್ಲದೇ 90ರ ದಶಕದಲ್ಲೂ ಒಂದೆರಡು ಬಾರಿ ಇಂಥ ಘರ್ಷಣೆ ನಡೆದು ಕರ್ಫ್ಯೂ ಜಾರಿಯಾಗಿ ಗಣಪತಿ ಮೆರವಣಿಗೆ ಅರ್ಧದಲ್ಲೆ ನಿಂತು ಹೋಗಿತ್ತು. ಈ ವಿಷಯ ಲೋಕಸಭೆಯಲ್ಲಿ ಪ್ರತಿಧ್ವನಿಸಿತ್ತು. ಒಮ್ಮೆ ಪೊಲೀಸರೇ ಸೇರಿಕೊಂಡು ಗಣಪತಿ ವಿಸರ್ಜನೆ ಮಾಡಿದ್ದರಿಂದ ಇದಕ್ಕೆ ಪೊಲೀಸ್ ಗಣಪತಿ ಎಂದು ಕೂಡ ಕರೆಯಲಾಗುತ್ತಿತ್ತು. ಅಂದಿನಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗಣೇಶೋತ್ಸವಕ್ಕೆ ಭಾರಿ ಬಿಗಿ ಬಂದೋಬಸ್ತ್ ಮಾಡಿಕೊಂಡು ಬರಲಾಗುತ್ತಿದೆ.

ಕೋವಿಡ್‌ನಲ್ಲಿ ವಿಜೃಂಭಣೆಗೆ ಅಡ್ಡಿ:
ಶ್ರೀವಿದ್ಯಾ ಗಣಪತಿ ವತಿಯಿಂದ ನಡೆಯುವ ಅದ್ಧೂರಿ ಗಣೇಶೋತ್ಸವಕೆ ಕೋವಿಡ್-19 ಸಂದರ್ಭದಲ್ಲಿ ಅಡ್ಡಿ ಉಂಟಾಗಿತ್ತು. 62 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅಂದು 2 ಅಡಿ ಎತ್ತರದ ಪುಟ್ಟ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಸಂದರ್ಭದಲ್ಲೂ 7 ಅಡಿ ಉದ್ದದ ಬೃಹತ್ ಗಾತ್ರದ ಭೂರಕ್ಷಾ ಗಣಪತಿಯನ್ನು ಪ್ರತಿಷ್ಠಾಪಿಸಲು ಮಂಡಳಿ ತೀರ್ಮಾನಿಸಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯನ್ವಯ ಅದನ್ನು ಕೈಬಿಡಲಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ, ಆ ಸಮಯದಲ್ಲಿ ಯಾವುದೇ ವಿಜೃಂಭಣೆ ಇಲ್ಲದೇ ಗಣೇಶೋತ್ಸವವನ್ನು ಆಚರಣೆ ಮಾಡಲಾಗಿತ್ತು.

ಪ್ರತಿವರ್ಷದಂತೆ ಈ ವರ್ಷವೂ ಎಲ್ಲಾ ಹಿಂದೂ ಬಾಂಧವರ ಕೃಪಕಟಾಕ್ಷದೊಂದಿಗೆ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಜನಾಂಗದ ಸಮೃದ್ಧಿ ಮತ್ತು ರಕ್ಷಣೆಯ ಪ್ರತಿರೂಪವಾಗಿ ಈ ಬಾರಿಯ ದೊಡ್ಡ ಗಣೇಶನನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಜನತೆ ಸಂಪೂರ್ಣ ಸಹಕಾರವನ್ನು ನೀಡಬೇಕು. ದೇವರ ಕೃಪೆಗೆ ಪಾತ್ರರಾಗಬೇಕು.-ಸುಂದರ್ ರಾಜ್, ಅಧ್ಯಕ್ಷ, ಶ್ರೀವಿದ್ಯಾ ಗಣಪತಿ ಮಂಡಳಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net