

ಮೈಸೂರು: ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಶಾಸಕ ಎಲ್.ನಾಗೇಂದ್ರ ಕರೆ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 26, 40, 41 ಹಾಗೂ 42ರ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು ಹಾಗೂ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಬಡವರು, ದೀನ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಆದ್ದರಿಂದ ಪಕ್ಷದ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು ಹಾಗೂ ಉಸ್ತುವಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ, ನಮ್ಮ ಸರ್ಕಾರದ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು ಎಂದರು.
ಕಳೆದ ಐದು ವರ್ಷಗಳಿಂದ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಪಾರ ಅಭಿವೃದ್ಧಿ ಕೆಲಸಗಳಾಗಿವೆ. ರಸ್ತೆ, ಚರಂಡಿ, ಕುಡಿಯುವ ನೀರು ಪೂರೈಕೆ, ಯುಜಿಡಿ ನಿರ್ಮಾಣ, ಪಾರ್ಕ್‌ಗಳ ಅಭಿವೃದ್ಧಿ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈ ಬಗ್ಗೆಯೂ ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು ಎಂದರು.
ಮೇಯರ್ ಶಿವಕುಮಾರ್, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ವಾಣಿಶ್ ಕುಮಾರ್, ಮುಖಂಡರಾದ ದಿನೇಶ್ ಗೌಡ, ಪುನೀತ್, ರಮೇಶ್ ಇದ್ದರು.