ಚಾಮಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅನಗತ್ಯ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

Yaduveer-1
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಮೈಸೂರು: ಚಾಮಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅವಶ್ಯತೆ ಇಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಧ್ವನಿಗೂಡಿಸಿರುವ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಹಿಂದಿನ ಕಾಲದಿಂದ ದೇವಸ್ಥಾನ ಹೇಗೆ ನಡೆಯುತ್ತಿದೆಯೋ ಅದೇ ರೀತಿ ಮುಂದೆಯೂ ನಡೆಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಟ್ಟಕ್ಕೆ ಬರುವ ಹಣದಿಂದಲೇ ದೇವಾಲಯ ಅಭಿವೃದ್ಧಿ ಮಾಡಬಹುದು. ಹಾಗಾಗಿ ಪ್ರತ್ಯೇಕವಾಗಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅಗತ್ಯವಿಲ್ಲ. ದೇವಾಲಯಗಳ ವಿಚಾರದಲ್ಲಿ ಸರ್ಕಾರ ಪಾತ್ರ ವಹಿಸಬಾರದು ಎಂದು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ನಿಯಂತ್ರಣಕ್ಕೆ ಒಳಪಡದೆ ದೇವಾಲಯಗಳು ಸ್ವಾಯತ್ತವಾಗಿ ಇರಬೇಕು. ಯಾವುದೇ ನಿಯಂತ್ರಣಕ್ಕೆ ಒಳಪಡದೆ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ಹೀಗಾಗಿ ಪ್ರಾಧಿಕಾರ ರಚನೆ ಮಾಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ತಾಯಿ ಪ್ರಮೋದಾ ದೇವಿ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಕಾನೂನಾತ್ಮಕವಾಗಿ ಹೈಕೋರ್ಟ್ ಪ್ರಾಧಿಕಾರ ರಚನೆಗೆ ತಡೆ ನೀಡಿದೆ ಎಂದರು.
ನಾಡಹಬ್ಬ ದಸರಾವನ್ನು ಅದ್ಧೂರಿಯಾಗಿ ಹಾಗೂ ಜನಸಾಮಾನ್ಯರ ದಸರಾವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು ಸ್ವಾಗತಾರ್ಹ. ಇದರಿಂದ ನಗರಕ್ಕೆ ಹೆಚ್ಚು ಪ್ರವಾಸಿಗರು, ಜನರು ಆಗಮಿಸುತ್ತಾರೆ. ಅರಮನೆಯಲ್ಲೂ ರಾಜ ಪರಂಪರೆಯ ರೀತಿ ನವರಾತ್ರಿ ನಡೆಯುತ್ತದೆ ಎಂದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೆಆರ್‌ಎಸ್ ಭರ್ತಿಯಾಗಿದೆ. ಹೀಗಾಗಿ ರಾಜಮನೆತನದಿಂದಲೂ ಸಂಪ್ರದಾಯದಂತೆ ಆ.15ರಂದು ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲಾಗುವುದು. ಎಲ್ಲ ಜಲಾಶಯಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕಿದೆ. ಕೆಆರ್‌ಎಸ್ ಜಲಾಶಯ ತುಂಬಾ ಹಳೆಯದು. ಅದರ ನಿರ್ವಹಣೆಯನ್ನು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದ್ದು, ಸಿಬಿಐ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು. ಅಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net