

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಸಮೀಪದ ತೊರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಬಾರಿ 2.53 ಲಕ್ಷ ರೂ, ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಟಿ.ಎಸ್.ಕುಮಾರ್ ತಿಳಿಸಿದರು.
ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಇತ್ತೀಚೆಗೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ವರ್ಷದ ಅಂತ್ಯಕ್ಕೆ ಸದಸ್ಯರಿಂದ 64.80 ಲಕ್ಷ ರೂ, ಮತ್ತು ಸರ್ಕಾರದಿಂದ 54,000 ರೂ. ಒಟ್ಟು 65.38 ಲಕ್ಷ ರೂ.ಗಳ ಬಂಡವಾಳವಿತ್ತು. 2023-24ನೇ ಸಾಲಿಗೆ 459 ಸದಸ್ಯರಿಗೆ 5 ಲಕ್ಷ ರೂ. ಬೆಳೆ ಸಾಲ ವಿತರಣೆ ಮಾಡಿದ್ದು, 18 ರೈತ ಸದಸ್ಯರಿಗೆ 60 ಲಕ್ಷ ರೂ. ಮಧ್ಯಮಾವಧಿ ಸಾಲ ವಿತರಣೆ ಮಾಡಲಾಗಿದೆ ಎಂದರು.
12 ಸ್ವಸಹಾಯ ಸಂಘಳಿಗೆ 82 ಲಕ್ಷ ರೂ, ಲಿಂಕೇಜ್ ಸಾಲ ವಿತರಣೆ ಮಾಡಿದ್ದು, 110 ರೈತ ಸದಸ್ಯರಿಗೆ 29.82 ಲಕ್ಷ ರೂ, ಹೈನುಗಾರಿಕೆ ಉತ್ತೇಜನ ಸಾಲ ವಿತರಣೆ ಮತ್ತು ವ್ಯಾಪಾರದಿಂದ 3.45 ಲಕ್ಷ ರೂ. ಲಾಭ ಬಂದಿದ್ದು ಒಟ್ಟಾರೆ 2.53 ಲಕ್ಷ ರೂ, ನಿವ್ವಳ ಲಾಭ ಬಂದಿದೆ ಎಂದರು.
ಸಂಘದೊಂದಿಗೆ ವ್ಯವಹರಿಸುತ್ತಿರುವ ಬ್ಯಾಂಕಿನ ಮ್ಯಾನೇಜರ್ ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಎಚ್.ಎಂ.ಮಹದೇವಸ್ವಾಮಿ, ಸಂಘದ ನಿರ್ದೇಶಕರು, ಸದಸ್ಯರು, ಸುತ್ತಮುತ್ತಲ ಗ್ರಾಮದ ಮುಖಂಡರು ಭಾಗವಹಿಸಿದ್ದರು.