ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ

04rajesh15
Published on

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರದಲ್ಲೂ ನಡೆಯುವ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಮೈಸೂರು ದಸರಾ ಭಾಗವಾಗಿ ಈ ಹಿಂದಿನಂತೆ ಚಾಮರಾಜನಗರ ದಸರಾ ಮಹೋತ್ಸವವನ್ನ ಅ.7 ರಿಂದ 9 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ವೇದಿಕೆ, ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ ಹಾಗೂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಇದರೊಂದಿಗೆ ದಸರಾ ಕವಿಗೋಷ್ಠಿ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಈಗಾಗಲೇ ಜಿಲ್ಲಾ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಯಸುವ ವಿವಿಧ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಹಲವಾರು ಜಾನಪದ ಕಲಾವಿದರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಆದರೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಧ್ಯವರ್ತಿಗಳ ಮೂಲಕ ಆಯೋಜನೆ ಮಾಡುತ್ತಾರೆ ಎಂಬ ಆರೋಪ ಕಲಾವಿದರಿಂದ ಕೇಳಿ ಬರುತ್ತಿದೆ. ಮಧ್ಯವರ್ತಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಸ್ಥಳೀಯ ಕಲಾವಿದರಿಗೆ ಅವಕಾಶ ಇಲ್ಲದಂತಾಗುತ್ತದೆ. ಅವರು ಹೊರಗಿನವರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಶೇ.75 ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ.

ಪ್ರೋತ್ಸಾಹ ಧನದಲ್ಲಿ ತಾರತಮ್ಯ ಮಾಡದಿರಲಿ:
ಈ ಹಿಂದಿನ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಪ್ರೋತ್ಸಾಹ ಧನ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಮಾತುಗಳೇ ಕೇಳಿಬರುತ್ತಿತ್ತು. ಈ ಬಾರಿಯೂ ಅದು ಮರುಕಳಿಸದಿರಲೀ ಎಂಬ ಕೂಗು ಕಲಾವಿದರಿಂದ ಎದ್ದಿದೆ. ಮುಖ್ಯ ವೇದಿಕೆಯಲ್ಲಿ ಸ್ಥಾನ ಪಡೆಯುವ ಕೆಲವು ಕಲಾವಿದರಿಗೆ ಪ್ರೋತ್ಸಾಹ ಧನದಲ್ಲಿ ಹೆಚ್ಚುಕಡಿಮೆ ಮಾಡಲಾಗುತ್ತದೆ ಅದನ್ನು ಈ ಬಾರಿ ಸರಿ ಸರಿದೂಗಿಸಬೇಕು. ಸ್ಥಳೀಯರು ಎಂದು ಅರ್ಜಿ ಸಲ್ಲಿಸಿ ಅವಕಾಶ ಪಡೆಯುವ ಎಲ್ಲಾ ಕಲಾವಿದರಿಗೂ ಸಮಾನವಾದ ಪ್ರೋತ್ಸಾಹ ಧನವನ್ನು ನೀಡಬೇಕು. ಈಗಾಗಲೇ ಕಾರ್ಯಕ್ರಮಗಳ ಆಯೋಜನೆ ಮಾಡುತ್ತೇವೆ ಎಂದು ಮಧ್ಯವರ್ತಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ಮಾಡಿಕೊಡದೇ, ಸ್ಥಳೀಯವಾಗಿ ಅನುಭವ ಇರುವ ಕಲಾವಿದರನ್ನು ಸಮಿತಿಗಳಿಗೆ ನೇಮಕ ಮಾಡಿಕೊಳ್ಳಬೇಕು. ಈ ಮೂಲಕ ಮಧ್ಯವರ್ತಿಗಳಿಂದ ಹಣ ಪೋಲಾಗುವುದನ್ನು ತಡೆಯಬಹುದಾಗಿದೆ ಎಂಬುದು ಸ್ಥಳೀಯ ಕಲಾವಿದರ ಆಭಿಪ್ರಾಯವಾಗಿದೆ.

ಉತ್ಸವ ವೈವಿದ್ಯಮಯಗೊಳಿಸಿ:
ವಿವಿಧ ವೇದಿಕೆಗಳಲ್ಲಿ ನಡೆಯುವ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇರೆ ಬೇರೆ ಸಮಯದಲ್ಲಿ ನಡೆಯುವಂತೆ ನೋಡಿಕೊಂಡರೆ ಎಲ್ಲಾ ಕಾರ್ಯಕ್ರಮಗಳಿಗೂ ಪ್ರೇಕ್ಷಕರು ಉಪಸ್ಥಿತಿ ಇರುತ್ತದೆ. ದಸರಾ ಮಹೋತ್ಸವದ ಸಮಯದಲ್ಲೇ ಮೂರು ದಿನವೂ ಲಪುಷ್ಪ ಪ್ರದರ್ಶನ ನಡೆಯಬೇಕು. ಅದಲ್ಲದೇ ಜಿಲ್ಲಾಧಿಕಾರಿ ಕಚೇರಿ, ಬಿ.ರಾಚಯ್ಯ ಜೋಡಿ ರಸ್ತೆಗೆ ಮಾತ್ರ ದೀಪಾಲಂಕಾರ ಸೀಮಿತವಾಗದೇ ನಗರದ ಎಲ್ಲಾ ಪ್ರಮುಖ ವೃತ್ತಗಳಿಗೂ ದೀಪಲಂಕಾರ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಶಾಲಾ-ಕಾಲೇಜು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು. ಅವರಿಗೆ ನೀಡುವ ಪ್ರೋತ್ಸಾಹ ಧನವನ್ನು ಈ ಬಾರಿ ಹೆಚ್ಚಳ ಮಾಡಬೇಕು. ಎಲ್ಲಾ ಕಲಾವಿದರಿಗೂ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಅದಲ್ಲದೇ ಮೂರು ದಿನವೂ ಚಲನಚಿತ್ರೋತ್ಸವವನ್ನು ಆಯೋಜನೆ ಮಾಡಿ, ಜಿಲ್ಲೆಯವರೇ ಆದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ಈ ಮೂಲಕ ವೈವಿದ್ಯಮಯವಾಗಿ ಈ ಬಾರಿಯ ದಸರಾ ಆಚರಣೆಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

ಕವಿಗೋಷ್ಠಿ ಅರ್ಥಪೂರ್ಣವಾಗಿರಲಿ:
ಈ ಬಾರಿಯ ದಸರಾ ಕವಿಗೋಷ್ಠಿ ಅರ್ಥಪೂರ್ಣವಾಗಿ ನಡೆಯಬೇಕು ಎಂಬ ಸದಾಶಯವನ್ನು ಹಿರಿಯ ಸಾಹಿತಿಗಳು ವ್ಯಕ್ತಪಡಿಸಿದ್ದಾರೆ. ಭಾಗವಹಿಸುವ ಪ್ರತಿಯೊಬ್ಬ ಕವಿಗಳಿಗೂ ಪ್ರಮಾಣ ಪತ್ರ, ಸ್ಮರಣಿಕೆಯನ್ನು ಕಾರ್ಯಕ್ರಮದಲ್ಲೇ ವಿತರಣೆ ಮಾಡಬೇಕು. ಸೂಕ್ತ ಸಮಯಕ್ಕೆ ಪ್ರೋತ್ಸಾಹ ಧನವನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಹಿಂದಿಗಿಂತಲೂ ಹೆಚ್ಚಿನ ಅನುದಾನ ಈ ಬಾರಿಯ ದಸರಾಗೆ ನೀಡುವುದರಿಂದ ಮೊದಲ ದಿನದ ದಸರಾ ಮೆರವಣಿಗೆಗೆ ಆನೆಯನ್ನು ಕರೆಸುವಂತಹ ಪ್ರಯತ್ನವನ್ನು ಮಾಡಬೇಕು. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ನಡೆಯುವ ದಸರಾ ವೈಭವವನ್ನು ಚಾಮರಾಜನಗರದಲ್ಲೂ ಮುಂದುವರಿಸಬೇಕು. ಈ ಮೂಲಕ ಅದ್ಧೂರಿಯಾಗಿ ಜಿಲ್ಲಾ ದಸರಾ ಮಹೋತ್ಸವವನ್ನು ಆಚರಣೆ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಈ ಬಾರಿಯ ದಸರಾ ಕವಿಗೋಷ್ಠಿ ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಭಾಗವಹಿಸುವ ಕವಿಗಳ ಆಯ್ಕೆ, ಪ್ರೋತ್ಸಾಹ ಧನವನ್ನು ಪಾರದರ್ಶಕವಾಗಿ ವಿತರಣೆ ಮಾಡಬೇಕು. ಕವಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು.-ಸೋಮಶೇಖರ ಬಿಸಲವಾಡಿ, ಹಿರಿಯ ಸಾಹಿತಿ, ಚಾಮರಾಜನಗರ ಈ ಬಾರಿಯ ದಸರಾ ಮಹೋತ್ಸವದಲ್ಲಿ ಶೇ.75 ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು. ಪ್ರೋತ್ಸಾಹ ಧನ ವಿತರಣೆಯಲ್ಲಿ ತಾರತಮ್ಯ ಮಾಡಬಾರದು. ಈ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಬೇಕು.-ಶಿವಶಂಕರ್ ಚಟ್ಟು, ಯುವ ಕಲಾವಿದ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net