ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಅತ್ಯಗತ್ಯ

27rajesh8
Published on

ಚಾಮರಾಜನಗರ: ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇನ್ನಿತರೆ ವಿಚಾರಗಳ ಕುರಿತು ಪರಿಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಅಗತ್ಯವಾಗಿದೆ ಎಂದು ಕಾಂಪೋಸ್ಟ್ ಅಭಿವೃದ್ದಿ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಸಲಹೆ ನೀಡಿದರು.

ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಜನಹಿತಾಶಕ್ತಿ ಹೋರಾಟ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲ ಅಂಶಗಳು ಅಡಕವಾಗಿವೆ. ಮಹಿಳೆಯರು, ಪುರುಷರು, ವಿದ್ಯಾರ್ಥಿಗಳ ಅನೂಕೂಲತೆಗೆ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕುದೇರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಸಿ.ಮಹೇಂದ್ರ ಮಾತನಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಗ್ರಾಮಪಂಚಾಯಿತಿಯಿಂದ ಹಿಡಿದು, ಪ್ರಧಾನಿ, ರಾಷ್ಟ್ರಪತಿಯಂತಹ ಉನ್ನತಹುದ್ದೆಗೇರಲು ಸಂವಿಧಾನದ ಕೊಡುಗೆ ಅಪಾರ. ವಿದ್ಯಾರ್ಥಿಗಳು ಸಂವಿಧಾನ ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ತಿಮ್ಮರಾಜು ಮಾತನಾಡಿ, ವಿವಿಧ ಕಾಲೇಜುಗಳಲ್ಲಿ ಸಂವಿಧಾನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಹಿತಾಶಕ್ತಿ ಹೋರಾಟವೇದಿಕೆ ಅಧ್ಯಕ್ಷ ರಾಮಸಮುದ್ರಸುರೇಶ್, ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ನಾಗರಾಜು, ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ರಂಗಸ್ವಾಮಿ, ಹಿರಿಯ ಉಪನ್ಯಾಸಕ ಮಹಾಲಿಂಗಸ್ವಾಮಿ, ನಾಗರಾಜು, ಸುರೇಶ್, ಪ್ರಸಾದ್, ಕೃಷ್ಣಮೂರ್ತಿ, ರಶ್ಮಿಕಾ, ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net