

ಮಂಡ್ಯ : ಕಾವೇರಿ ನೀರು ವಿಚಾರ ಮುಂದಿಟ್ಟುಕೊಂಡು ಹೋರಾಟಗಾರರು ಸೇರಿದಂತೆ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹೇಳಿಕೆ ಖಂಡನೀಯ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಟೀಕಿಸಿದರು.
ಶ್ರೀರಂಗಪಟ್ಟಣದ ಕುವೆಂಪು ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಶುಕ್ರವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಚಿಂದಗಿರಿಕೊಪ್ಪಲು ಗ್ರಾಮಸ್ಥರೊಂದಿಗೆ ಮುಖ್ಯರಸ್ತೆ ಮಾರ್ಗವಾಗಿ ಬೈಕ್ ರ‌್ಯಾಲಿ ನಡೆಸಿ ಬಳಿಕ ತಾಲೂಕು ಕಚೇರಿ ಮುಂಭಾಗ ತಮಿಳುನಾಡಿಗೆ ಕಾವೇರಿ ನೀರು ಸ್ಥಗಿತಕ್ಕೆ ಮಾಡುತ್ತಿರುವ ಪ್ರತಿಭಟನಾ ಧರಣಿ ಕುರಿತು ಅವರು ಮಾತನಾಡಿದರು.
ಕಾವೇರಿ ಅಚ್ಚಕಟ್ಟು ಪ್ರದೇಶದ ರೈತರ ಬೆಳೆ ರಕ್ಷಣೆಗೆ ನಾಲೆಗಳಿಗೆ ಇನ್ನು 2 ಕಟ್ಟು ನೀರು ಹರಿಸಿ ಉಳಿಸುವುದು ರಾಜ್ಯ ಸರ್ಕಾರಕ್ಕೆ ಗೊತ್ತು. ಆದರೆ ಕಾವೇರಿ ವಿಚಾರದಲ್ಲಿ ಜೆಡಿಎಸ್-ಬಿಜೆಪಿಯಂತೆ ಹೋರಾಟವು ರಾಜಕೀಯವಾಗುತ್ತಿದೆ ಎಂಬ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕೆ ಕಾಂಗ್ರೆಸ್ ಸರ್ಕಾರ ಹೊಂದಿರುವ ರೈತ ವಿರೋಧಿ ನೀತಿಯ ಸ್ವಯಂಘೋಷಣೆ ಎಂಬುದು ಸ್ಪಷ್ಟ ಎಂದರು.
ಕಾಂಗ್ರೆಸ್ ಸರ್ಕಾರ ಪ್ರಸ್ತುತ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾಗಿರುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಆರೋಪ ಹಾಕಿ ತಾನು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕನ್ನಂಬಾಡಿ ಜಲಾಶಯದಲ್ಲಿ ಸಂಗ್ರಹವಿರುವ ಕಾವೇರಿ ನೀರು ಈಗಿನ ನವೆಂಬರ್, ಡಿಸೆಂಬರ್ ಮಾತ್ರವಲ್ಲದೆ ಮುಂದಿನ 2024ರ ಮೇ ತಿಂಗಳವರೆಗೆ ಬಳಕೆಗೆ ಬೇಕಿದೆ. ಈ ತೀವ್ರತೆಯನ್ನೆ ಅರಿಯದ ಜನಪ್ರತಿನಿಧಿಗಳು ರಾಜಕೀಯದ ಹೇಳಿಕೆ ನೀಡುವುದು ತರವಲ್ಲ ಎಂದರು.
ಕರ್ನಾಟಕದ ಹಿತಕಾಯಲು ಹಾಗೂ ಕಾವೇರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ರಾಜ್ಯದ ಜವಾಬ್ದಾರಿ ಹೊತ್ತ ಕಾಂಗ್ರೆಸ್ ಸರ್ಕಾರ ಒಗ್ಗಟ್ಟಿನಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥಪಡಿಸಿ ಮಧ್ಯಸ್ಥಿತಿಕೆಗೆ ಕರೆತರುವ ಮೂಲಕ ತಮಿಳುನಾಡಿನೊಂದಿಗೆ ಉಂಟಾಗಿರುವ ಬಿಕ್ಕಟ್ಟನ್ನು ಶಾಶ್ವತವಾಗಿ ಶಮನಗೊಳಿಸಲು ಮುಂದಾಗಬೇಕು. ಇದಕ್ಕೆ ರಾಜ್ಯದ ಎಲ್ಲರ ಸಹಕಾರವೂ ಅಗತ್ಯ. ಕಾವೇರಿ ನೀರು ಹಂಚಿಕೆ ವಿವಾದ ಬಗೆಹರಿಸಿದ ಸಂಪೂರ್ಣ ಕೀರ್ತಿ ನಿಮಗೆ ಸಲ್ಲುತ್ತದೆ ಹೊರತು ಇಲ್ಲೂ ರಾಜಕೀಯ ಕೆಸರೆರಚಾಟ ಮನಸ್ಥಿತಿ ಬಿಡಬೇಕು ಎಂದರು.
ಪ್ರತಿಭಟನೆಯಲ್ಲಿ ಚಿಂದಗಿರಿಕೊಪ್ಪಲು ಗ್ರಾಮದ ಮುಖಂಡರಾದ ಕೆಂಪೇಗೌಡ, ಸಿ.ಟಿ.ರಾಮಚಂದ್ರು, ಬೆಟ್ಟೇಗೌಡ, ಜಯಚಂದ್ರ, ಗೋವಿಂದೇಗೌಡ, ಮಾಧವಮೂರ್ತಿ, ಸಂಪತ್ತು ಹಾಗೂ ಭೂಮಿತಾಯಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರುಗಳಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸಂಚಾಲಕ ಡಿ.ಮಂಜುನಾಥ್, ಹುಳುವಾಡಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಪಾಲಹಳ್ಳಿ ರಾಮಚಂದ್ರು, ಕಡತನಾಳು ಚಾಮರಾಜು, ಕೃಷ್ಣ, ಕೂಡಕುಪ್ಪೆ ಆಲೆಮನೆ ಸೋಮ, ರಾಜು, ಸೊಸೈಟಿ ದೇವರಾಜು, ಮೇಳಾಪುರ ದೇವರಾಜು ಇತರರು ಭಾಗಿಯಾಗಿದ್ದರು.