ಸಚಿವ ರಾಜಣ್ಣ ಯಾರ ಹೆಸರು ಪ್ರಸ್ತಾಪಿಸಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Minister-N.Cheluvarayaswamy
Published on

ಮಂಡ್ಯ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದನದಲ್ಲಿ ಚರ್ಚೆ ಆಗಿದೆ. ಸಿಎಂ, ಗೃಹ ಸಚಿವರು ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ಕೊಟ್ಟ ನಂತರ ತನಿಖೆ ಮಾಡುತ್ತಾರೆ. ಬಳಿಕ ಸತ್ಯ ಬಹಿರಂಗವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಹಾಗೂ ಅವರ ಪುತ್ರ ಯಾರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಆದ್ದರಿಂದ ಇದು ಅನಾವಶ್ಯಕ ಚರ್ಚೆ. ಈ ವಿಚಾರಕ್ಕೆ ಬೇರೆ ಆಯಾಮ ಕೊಡುವ ಅವಶ್ಯಕತೆ ಇಲ್ಲ. ಸದನದಲ್ಲಿ ಬಿಜೆಪಿ ಪಕ್ಷದವರು ಹದಿನೈದು ದಿನ ಫೇಲ್ ಆದರು. ಅವರು ಜನಪರವಾದ ವಿಚಾರವನ್ನು ಚರ್ಚೆ ಮಾಡಿಲ್ಲ. ಸರ್ಕಾರವನ್ನ ಟೀಕೆ ಮಾಡುವ ವಿಚಾರ ಬಿಜೆಪಿಗೆ ಇಲ್ಲ. ತಪ್ಪುಗಳನ್ನು ಹುಡುಕಲು ಆಗಿಲ್ಲ. ಹೀಗಾಗಿ ಹನಿಟ್ರ್ಯಾಪ್ ತಗೊಂಡಿದ್ದಾರೆ ಎಂದರು.

ನಮ್ಮದು ಉತ್ತಮ ಬಜೆಟ್ ಇತ್ತು ಎಂದು ಮಾಧ್ಯಮಗಳು ಹೇಳಿವೆ. ಇದನ್ನ ತಪ್ಪಿಸಲು ಬಿಜೆಪಿ ಅವರು ಹನಿಟ್ರ್ಯಾಪ್ ವಿಚಾರ ಎತ್ತಿದ್ದಾರೆ. ಪ್ರಭಾವಿ ಸಚಿವರು ಎಂದಾಗ ಮಾತ್ರ ರಾಜಣ್ಣ ಅವರು ಸದನದಲ್ಲಿ ಹೇಳಿದ್ದಾರೆ. ಬಿಜೆಪಿ ಬಹಳ ಫ್ರೀಪ್ಲ್ಯಾನ್ ಮಾಡಿ ಅವರ ವೈಫಲ್ಯದ ದಿಕ್ಕು ತಪ್ಪಿಸಲು ಮಾಡಿದ್ದಾರೆ. ಈಗಾಗಲೇ ಸಿಎಂ, ಗೃಹಸಚಿವರು ರಾಜಣ್ಣ ಅವರ ಬಳಿ ಚರ್ಚೆ ಮಾಡಿದ್ದಾರೆ. ಇತಿಹಾಸ ನೋಡಿದರೆ ಬಿಜೆಪಿ ಅವರ ಬಳಿಯೇ ಹನಿಟ್ರ್ಯಾಪ್ ಹೆಚ್ಚಿದೆ ಎಂದು ತಿರುಗೇಟು ನೀಡಿದರು.

ಹನಿಟ್ರ್ಯಾಪ್ ಆಗಲಿ ಅಥವಾ ಸಿಡಿ ಆಗಲಿ, ಅದನ್ನ ಸರಿ ಎಂದು ಹೇಳಲ್ಲ. ಬೇರೆಯವರ ವೈಯಕ್ತಿಕ ಜೀವನದಲ್ಲಿ ನಾವು ಪ್ರವೇಶ ಮಾಡಬಾರದು. ಸತ್ಯಾಂಶ ಹೊರಬರುವವರೆಗೂ ನಾವು ಮಾತನಾಡುವುದು ಸೂಕ್ತವಲ್ಲ. ಬಿಜೆಪಿ ಅವರೇ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ವೇಗ ಹೆಚ್ಚು. ಹೀಗಾಗಿ ಅವರ ಮೇಲೆ ಎಲ್ಲರೂ ಬೆಟ್ಟು ಮಾಡುತ್ತಾರೆ. ಕೆಲವರು ಸಹಿಸಲ್ಲ. ಸಿದ್ದರಾಮಯ್ಯ ವಿರುದ್ಧ ಸಹಿಸದೇ ಮುಡಾ ವಿಚಾರ ತಂದರು. ಬಿಜೆಪಿಯಲ್ಲಿ ನಾಲ್ಕು ಗುಂಪು ಇದೆ. ಅವರನ್ನ ನೋಡಿದರೆ ಅಯ್ಯೋ ಎನಿಸುತ್ತದೆ. ಮುನಿರತ್ನ ಬಗ್ಗೆ ಏಕೆ ಮಾತನಾಡಬೇಕು?. ಅಶೋಕ್ ಅವರೇ ಇಂಜೆಕ್ಷನ್ ಕೊಡಲು ಬಂದಿದ್ದರು ಎಂದು ಹೇಳಿದ್ದಾರೆ. ಬಿಜೆಪಿ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಿಷ್ಟಕ್ಕೆಲ್ಲ ಶನೇಶ್ಚರನೇ ಕಾರಣನಾ ಎಂದು ಪ್ರಶ್ನಿಸಿದರು.

ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಬಾಯಿಗೆ ಏನು ಬರುತ್ತದೋ ಅದನ್ನು ಮಾತನಾಡಿದರೆ ಸಂಸ್ಕಾರ ಇಲ್ಲದ ರೀತಿಯಲ್ಲಿ ಹೇಳಬೇಕಾಗುತ್ತದೆ. ಹನಿಟ್ರ್ಯಾಪ್‌ನಲ್ಲಿ ಡಿಕೆಶಿ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಇದ್ದಾರೆ ಎನ್ನುವುದು ಮಹಾನ್ ಅಪರಾಧ. ತನಿಖೆ ಆಗುವವರೆಗೂ ಸುಮ್ಮನೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಮಂಜುನಾಥ್ ಅವರ ಸೋಲನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಮಂಡ್ಯದವರು ಛತ್ರಿಗಳು ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಮಂಡ್ಯದ ಬಗ್ಗೆ ಡಿಕೆಶಿ ಅವರಿಗೆ ಗೌರವ, ಪ್ರೀತಿ ಇದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಲವು ವಿಚಾರಗಳಲ್ಲಿ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್ ಕೆಲವನ್ನು ಸರಿಪಡಿಸಿಕೊಳ್ಳದೇ ನೇರವಾಗಿ ಮಾತನಾಡುತ್ತಾರೆ. ಛತ್ರಿಗಳು ಎಂಬ ಹೇಳಿಕೆಯನ್ನು ಡಿಫೆಂಡ್ ಮಾಡಿಕೊಳ್ಳುವುದಿಲ್ಲ. ಅದು ಸರಿ ಎಂದು ಅವರಿಗೆ ಅಭಿನಂದನೆ ಹೇಳಲ್ಲ. ಈ ಬಗ್ಗೆ ಡಿಕೆಶಿ ಅವರಿಗೆ ಹೇಳುತ್ತೇವೆ ಎಂದು ಹೇಳಿದರು.

ಆದರೆ ಈ ವಿಚಾರದ ಬಗ್ಗೆ ಜೆಡಿಎಸ್ ಮಾತನಾಡುತ್ತಾರೆ. ಮಂಡ್ಯಕ್ಕೆ ಬಂದಿರುವ ಕೃಷಿ ವಿಶ್ವವಿದ್ಯಾನಿಲಯವನ್ನು ಬೇಡ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳುತ್ತಾರೆ. ಹಾಗಾದರೆ ಜಿಲ್ಲೆಯ ಬಗ್ಗೆ ಇಲ್ಲಿನ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರಿಗೆ ಸ್ವಾಭಿಮಾನ ಇಲ್ವಾ?. ನಾವು ಬೇಕಾದರೇ ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ಇದನ್ನ ಜೆಡಿಎಸ್ ಏಕೆ ಒಪ್ಪಿಕೊಳ್ಳುವುದಿಲ್ಲ. ಇಡೀ ರಾಮನಗರ ಜನ ಓಡಿಸಿದಾಗ ರೇವಣ್ಣನ ತಮ್ಮನಿಗೆ ಮಂಡ್ಯ ಜನ ಆಶ್ರಯ ಕೊಟ್ಟಿದ್ದಾರೆ. ಮಂಡ್ಯ, ಹಾಸನ ಎರಡು ಕಣ್ಣು ಎನ್ನುತ್ತಾರೆ. ಕೃಷಿ ವಿವಿಯಾದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ಇದಕ್ಕೆ ರೇವಣ್ಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಮಾರಸ್ವಾಮಿ ಇಲ್ಲಿ ಓಟ್ ಹಾಕಿಸಿಕೊಂಡು ಕೇಂದ್ರದಲ್ಲಿ ಮಂತ್ರಿ ಆಗಬೇಕು. ಸಿಎಂ ಆಗಲು ಕೂಡ ಕಾರಣವಾಗಿತ್ತು. ಮಂಡ್ಯದವರೂ ಬೇರೆಯವರನ್ನು ಪ್ರೀತಿಸಿದ್ದಾರೆ. ನಾವು ಬೇಧ ಭಾವ ಮಾಡಿಲ್ಲ. ದೇವೇಗೌಡರ ಕುಟುಂಬ ಮಂಡ್ಯಕ್ಕೆ ಕೊಟ್ಟ ಕೊಡುಗೆ ಇದೇನಾ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net