ಮನಮೋಹನ್‌ಸಿಂಗ್ ಅತ್ಯುತ್ತಮ ಪ್ರಧಾನಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂತಾಪ

karnataka-agriculture-minister-cheluvarayaswamy-meet-farmers.jpg
Published on

ಮಂಡ್ಯ: ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳ ಪೈಕಿ ಒಬ್ಬರಾದ ಡಾ.ಮನಮೋಹನ್ ಸಿಂಗ್ ನಿಧನ ಆಘಾತ ಉಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಹಣಕಾಸು ಸಚಿವ ಹಾಗೂ 10 ವರ್ಷ ಪ್ರಧಾನಿಯಾಗಿ ಅವರು ಜಾರಿಗೆ ತಂದ ಉದಾರಿಕರಣ ಸೇರಿದಂತೆ ಹಲವು ಆರ್ಥಿಕ ಸುಧಾರಣಾ ಕ್ರಮಗಳು ಇಂದಿಗೂ ದೇಶದ ಹಣಕಾಸಿನ ಸದೃಡತೆಗೆ ನೆರವಾಗಿವೆ. ಜತೆಗೆ ಜಾಗತಿಕ ಮನ್ನಣೆಗೆ ಪಾತ್ರವಾಗಿವೆ. ಭಾರತದ ಆರ್ಥಿಕ ಇತಿಹಾಸದಲ್ಲಿ ಮನಮೋಹನ್‌ಸಿಂಗ್ ಹೆಸರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದಿದ್ದಾರೆ.

ವಿದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅಲ್ಲಿನ ಬ್ಯಾಂಕ್‌ನ ಬಾಗಿಲು ಮುಚ್ಚುತ್ತಿದ್ದಾಗ ನಮ್ಮ ದೇಶದ ಬ್ಯಾಂಕುಗಳು ಸಶಕ್ತವಾಗುತ್ತಾ ಸಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ಸ್ಮರಣೀಯ. ಈ ನಿಟ್ಟಿನಲ್ಲಿ ಅವರ ಕೊಡುಗೆ ಅಪಾರ. ಅತ್ಯಂತ ಮಿತ ಭಾಷಿಯಾದರೂ ಕ್ಷಿಷ್ಟ ಸಂದರ್ಭದಲ್ಲಿ ವಿಚಲಿತರಾಗದೆ ಸ್ಪಷ್ಟ, ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದ ಮನಮೋಹನ್‌ಸಿಂಗ್ ಅವರು ದಕ್ಷ ಆಡಳಿತಗಾರರೂ ಆಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಎರೆಡು ಬಾರಿ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ಅನುಸರಿಸಿದ ವಿದೇಶಾಂಗ ನೀತಿ, ದಿಟ್ಟ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಟ್ಟಿತು. ಭಾರತ ಇಂದು ಒಂದು ಬಲಿಷ್ಟ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಅವರ ಪಾತ್ರ ಅಪಾರ. ಆರ್ಥಿಕ ತಜ್ಞ ಮಾತ್ರವಲ್ಲದೆ, ಬೋಧಕ ಹಾಗೂ ಸಚಿವಾಲಯದ ಅಧಿಕಾರಿಯಾಗಿಯೂ ಮೆಚ್ಚುಗೆಗೆ ಪಾತ್ರವಾಗಿದ್ದರು. 30 ವರ್ಷ ರಾಜ್ಯಸಭೆ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net