ಶೀಘ್ರ ಮೈತ್ರಿ ನಾಯಕರ ದಾಖಲೆ ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Minister-N.Cheluvarayaswamy
Published on

ಮಂಡ್ಯ: ಹಗರಣಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ನವರ ರೀತಿ ಬೀದಿ ಬೀದಿಯಲ್ಲಿ ನಾವು ಆಟ ಆಡಲ್ಲ. ನಾವು ಸರ್ಕಾರ ನಡೆಸುತ್ತಿದ್ದೇವೆ. ದಾಖಲೆ ಇದೆ, ಅದನ್ನು ಬಿಡುಗಡೆ ಮಾಡುತ್ತೇವೆ. ಎಚ್.ಡಿ.ಕುಮಾರಸ್ವಾಮಿ ರೀತಿ ನಮ್ಮ ಬಳಿ ಪೆನ್‌ಡ್ರೈವ್ ಇದೆ ಎಂದು ಹೇಳಲ್ಲ. ಸಧ್ಯದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ, ಎಲ್ಲವೂ ಹೊರಗೆ ಬರುತ್ತೆ. ಆದಷ್ಟೂ ಬೇಗ ತನಿಖೆ ಮುಗಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜನರು 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ರಾಜಿನಾಮೆ ಕೇಳುವುದಕ್ಕೆ ಬಿಜೆಪಿ-ಜೆಡಿಎಸ್‌ನವರು ಯಾರು?. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದ ತಟ್ಟೆಯಲಿ ಇಲಿ ನೋಡುತ್ತಿದ್ದಾರೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ನಿರಾಣಿ ಮೇಲೆ ಹಗರಣಗಳ ತನಿಖೆ ಆಗಿದೆ. ಗವರ್ನರ್ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ಮೊದಲು ಅದಕ್ಕೆ ಪ್ರಾಸಿಕ್ಯೂಷನ್ ಕೊಡಿ. ಯಾವ ರೀತಿ ತನಿಖೆ, ನೋಟೀಸ್ ಕೊಡಬೇಕೆಂದು ಕೇಂದ್ರ ಎಸ್‌ಒಪಿ ಹೊರಡಿಸಿದೆ. ಆದರೆ ಇವರು ಮುಡಾ ಹಗರಣ ಎತ್ತಿಕೊಂಡಿದ್ದಾರೆ. ಈ ಸಂಬಂಧ ಸಮಿತಿ ರಚನೆಯಾಗಿದೆ. ಒಂದು ತಿಂಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ. ಮುಡಾ ಎಲ್ಲರ ಕುತ್ತಿಗೆಗೆ ಬರಲಿದೆ ಕಾದು ನೋಡಿ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿಚಾರವೇ ಇಲ್ಲ. ಆದ್ದರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಎಂದು ಏನು ರಾಜಿನಾಮೆ ಕೊಡುವುದುಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಕಾಂಗ್ರೆಸ್‌ನವರೇ ಕಾರಣ, ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್ ಅವರೇ ಡೇಂಜರ್ ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ವಿಚಾರಕ್ಕೆ ಮಹತ್ವ ಇಲ್ಲ. ಮೊದಲು ಡಿಕೆಶಿ ಬೇಕಿತ್ತು. ಹಿಂದೆ ಲೋಕಸಭೆ ಚುನಾವಣೆಯಲ್ಲಿ ಡಿಸಿ ಕಚೇರಿ ಮುಂದೆ ಕೈ ಕೈ ಹಿಡಿದುಕೊಂಡಿದ್ದರು. ಅವತ್ತು ಡಿಕೆಶಿ ಚೆನ್ನಾಗಿದ್ದರು. ಇವಾಗ ಕೆಟ್ಟೊಗಿದ್ದಾರಾ?. ಹಿಂದೆ ಕುಮಾರಸ್ವಾಮಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಏನು ಮಾತನಾಡಿದ್ದರು ಎಂದರು.

ಪ್ರಾಸಿಕ್ಯೂಷನ್‌ಗೆ ಕೊಡಬೇಕಾದರೆ ಮೊದಲು ತನಿಖೆ ಆಗಬೇಕು. ನಂತರ ಪ್ರಾಸಿಕ್ಯೂಷನ್‌ಗೆ ಕೇಳಬೇಕು. ಕ್ರಿಮಿನಲ್ ಮೊಕದ್ದಮೆ ಇರುವವರು ಕೇಳುವುದಲ್ಲ. ಹೈಕಮಾಂಡ್, ಶಾಸಕರು, ಮಂತ್ರಿಗಳು, ರಾಜ್ಯದ ಜನರು ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ. ಆದ್ದರಿಂದ ಅವರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಮುಡಾ ಸಂಬಂಧ ನ್ಯಾಯಾಧೀಶರ ತಂಡ ರಚಿಸಿದ್ದು, ಸಮಗ್ರ ತನಿಖೆ ಆಗಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈಸೂರಿನಲ್ಲಿ ನಡೆಸಿದ ಪ್ರತಿಭಟನೆಗೆ ಬರಿ 25 ಸಾವಿರ ಜನ ಇದ್ದರು. ಅದೇ ನಾವು ಜನಾಂದೋಲನ ಮಾಡಿದಾಗ 1.5 ಲಕ್ಷ ಜನ ಸೇರಿದ್ದರು ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net