

ಮಂಡ್ಯ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎನ್‌ಕೌಂಟರ್‌ಗೆ ಪ್ಲ್ಯಾನ್ ಮಾಡಿದ್ದರೆ ಅವರ ಬಳಿ ಇರುವ ಏಜೆನ್ಸಿಯಿಂದ ತನಿಖೆ ಮಾಡಿಸಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಎನ್‌ಕೌಂಟರ್‌ಗೆ ಪ್ಲಾೃನ್ ಮಾಡಲಾಗಿತ್ತೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪ ಮಾಡಿದ್ದಾರೆ. ಎನ್‌ಕೌಂಟರ್‌ಗೂ ಇದಕ್ಕೂ ಸಂಬಂಧ ಏನಿದೆ. ಬಿಜೆಪಿ ಬಳಿ ಅನೇಕ ಏಜೆನ್ಸಿ ಇದೆಯಲ್ಲ, ತನಿಖೆ ಮಾಡಿಸಲಿ ಎಂದರು.
ಬಿಜೆಪಿ, ಜೆಡಿಎಸ್‌ನವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದಕ್ಕೆ ಇದ್ದಾರೆ. ತಪ್ಪು ಮಾಡಿಕೊಂಡಿದ್ದಾರೆ, ಆ ತಪ್ಪು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಎನ್‌ಕೌಂಟರ್ ಪ್ಲಾೃನ್ ಎನ್ನುವ ರೀತಿ ಹೇಳಿಕೆ ಕೊಟ್ಟರೆ ದಿಕ್ಕು ತಪ್ಪಲಿದೆ ಎಂದು ಮಾಡುತ್ತಿದ್ದಾರೆ. ಸಾರ್ವಜನಿಕರ ಹಿತವನ್ನ ಕಾಪಾಡುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜವಾಬ್ದಾರಿ. ಆದರೆ ಕಾನೂನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿಚಾರವನ್ನ ಬೆಳೆಸುವ ಕೆಲಸ ಆಗಬಾರದಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಆರ್‌ಎಸ್, ಈ ವಿಚಾರ ಬೆಳೆಸುತ್ತಿರುವುದ ಯಾರು. ಬೆಳಗ್ಗೆ ಎದ್ದರೆ ಪ್ರತಿಭಟನೆ ಹಾಗೂ ಹೇಳಿಕೆ ಕೊಡುತ್ತಿರುವುದು ಅವರೇ ತಾನೇ. ಒಂದು ಹಂತಕ್ಕೆ ಕ್ಲೋಸ್ ಮಾಡುವ ಕೆಲಸವನ್ನು ಸಿ.ಟಿ.ರವಿ, ಬಿಜೆಪಿ, ಜೆಡಿಎಸ್‌ನವರು ಮಾಡುತ್ತಿದ್ದಾರಾ?. ಬದಲಿಗೆ ಅವರೇ ಮುಂದುವರೆಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲದೇ ಇರುವ ವಿಚಾರವನ್ನ ಹೇಳುವ ಕೆಲಸ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್, ಬಿಜೆಪಿ ಇದೇ ಮಾಡುತ್ತಿದೆ. ಆದ್ದರಿಂದ ಸುಮ್ಮನೆ ರಾಜಕೀಯ ಪ್ರೇರಿತರಾಗಿ ಎಷ್ಟೇ ಮಾತನಾಡಿದರೂ ಪ್ರಯೋಜನ ಇಲ್ಲ ಎಂದರು.
ಸರ್ಕಾರಿ ಹಣದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಲಾಗುತ್ತಿದೆ ಎನ್ನುವ ಪ್ರಹ್ಲಾದ್ ಜೋಷಿ ಟೀಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಕಾಂಗ್ರೆಸ್ ಅಧಿವೇಶನ ನಡೆದ ನೆನಪಿಗಾಗಿ ಅಧಿವೇಶನ ಮಾಡುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಾರೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತೇವೆ. ಆದರೆ ಸರ್ಕಾರಿ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆಂದು ಜೋಶಿ ಅವರಿಗೆ ಅಕೌಂಟ್ ಕೊಟ್ಟವರು ಯಾರು?. ನಮ್ಮ ಪಕ್ಷ ಸಧೃಡವಾಗಿದ್ದು, ಪಕ್ಷದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಧಿವೇಶನದ ಬಳಿಕ ಸರ್ಕಾರ, ಪಕ್ಷದಲ್ಲಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ವಿಚಾರ ನಮ್ಮ ಮುಂದೆ ಇಲ್ಲ, ಆ ಬಗ್ಗೆ ಏನೂ ಗೊತ್ತಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸುಮ್ಮನೆ ಕೆಲವರು ಚರ್ಚೆ ಮಾಡುತ್ತಾರೆ ಅಷ್ಟೇ ಎಂದು ಹೇಳಿದರು.
ಸಿ.ಟಿ.ರವಿಗೆ ಆಣೆ ಪ್ರಮಾಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿ.ಟಿ.ರವಿ ಮಾತನಾಡಿರುವುದು ರೆಕಾರ್ಡ್ ಆಗಿಲ್ಲ. ಅದನ್ನ ಬಳಕೆ ಮಾಡಿಕೊಂಡು ನಾನು ಮಾತನಾಡಿಲ್ಲವೆಂದು ಹೇಳುತ್ತಿದ್ದಾರೆ. ಈ ರೀತಿ ಮಾತನಾಡಬಾರದಿತ್ತೆಂದು ಅವರ ಪಕ್ಷದವರೇ ನನ್ನೊಂದಿಗೆ ಹೇಳಿದ್ದಾರೆ. ಹಿರಿಯ ನಾಯಕನಾಗಿ ಮಾತನಾಡಿರುವುದೇ ಮಹಾ ಅಪರಾಧ. ಇದು ಆಕಸ್ಮಿಕ, ಯಾಕಾಯಿತೋ, ಏನಾಯಿತೋ ಮಾತನಾಡಿದ್ದೇನೆ. ಕ್ಷಮೆ ಕೇಳುತ್ತೇನೆಂದು ಹೇಳಿದ್ದರೆ, ಮರ್ಯಾದೆ ಹೋಗುವುದು ಸ್ವಲ್ಪ ಕಡಿಮೆ ಆಗುತ್ತಿತ್ತು. ಇನ್ನೂ ಅವರು ಮಾತನಾಡುವುದಕ್ಕೆ ನಿಂತಿದ್ದಾರೆ. ಯಾರೇ ಆಗಲಿ ಇಂತಹ ಪದಗಳನ್ನ ಉಪಯೋಗಿಸುವುದು ಗೌರವ ಅಲ್ಲ. ಆ ರೀತಿ ಚಾಲೆಂಜ್ ಮಾಡುವುದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕಲ್ವ. ಈ ಪ್ರಕರಣವನ್ನ ಸಿಐಡಿಗೆ ಕೊಡುವುದನ್ನ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಮಾಹಿತಿ ನೀಡಿದರು.