

ಮಂಡ್ಯ: ಆಪರೇಷನ್ ಕಮಲದ ಮೂಲಕ ನಮ್ಮ ಸರ್ಕಾರ ತೆಗೆಯಲು ಮುಂದಾಗಿದ್ದಾರೆ. ಅದೇ ರೀತಿ ನಮ್ಮ ಶಾಸಕರಲ್ಲಿ ಹಲವರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದಾರೆ. ಕಳೆದೊಂದು ವರ್ಷದಿಂದಲೂ ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರು ಬಿಜೆಪಿಯವರಿಗೆ ಮನ್ನಣೆ ಕೊಡುತ್ತಿಲ್ಲ. ನಾನು ಇಂತವರನ್ನು ಭೇಟಿ ಮಾಡಿದ್ದಾರೆ, ಇಷ್ಟು ಅಮಿಷ ಮಾಡಿದ್ದಾರೆ ಎನ್ನುವುದಿಲ್ಲ. ಆದರೆ ನಮ್ಮ ಶಾಸಕರನ್ನು ಸಂಪರ್ಕ ಮಾಡಿರುವುದು ಸತ್ಯ. ಇದಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ಯಾರ ಬಳಿ ಇದೆಯೋ, ಅವರು ಬಿಡುಗಡೆ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ಮಾಡುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಅಪರೇಷನ್ ಕಮಲ ಮಾಡಿದ್ದರು. ಹಣ ನೀಡದೇ ಯಾರು ಹೋಗಿಲ್ಲ ಆಗ. ನಮ್ಮ ಸರ್ಕಾರ ರಚನೆಯಾದಾಗಿನಿಂದ ಈ ಸರ್ಕಾರ ಉಳಿಯಲ್ಲ ಎಂದಿದ್ದರು. ಯಾವ ಕಾರಣದಿಂದ ನಮ್ಮ ಸರ್ಕಾರ ಉಳಿಯಲ್ಲ ಎನ್ನುತ್ತಿದ್ದಾರೆ. ಆಪರೇಷನ್ ಮಾಡುತ್ತೇವೆ ಎನ್ನುವುದಲ್ಲವೇ ಅದರ ಉದ್ದೇಶ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಹತ್ತಾರು ಬಾರಿ ಸರ್ಕಾರ ತೆಗೆಯುತ್ತೇವೆನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಉಪಚುನಾವಣೆಯಲ್ಲೂ ಕುಮಾರಸ್ವಾಮಿ ಈ ಸರ್ಕಾರ ಉಳಿಯಲ್ಲ ಎಂದು ಹೇಳಿದ್ದಾರೆ. ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಮೊದಲು ಆಪರೇಷನ್‌ಗೆ ಎಷ್ಟು ಕೊಟ್ಟಿದ್ದರೋ ಗೊತ್ತಿಲ್ಲ. ಆದರೆ ಮೊದಲಿಗಿಂತ ಈಗ ಅಪ್‌ಗ್ರೇಡ್ ಆಗಿರುತ್ತಾರೆ. ಚುನಾವಣೆಗಳು ಹಿಂದೆ ನಡೆದಂತೆ ಇಲ್ಲ. ಅದಕ್ಕೆ ಹೆಚ್ಚು ಆಫರ್ ಕೊಟ್ಟಿರಬಹುದು. ಸಾಮಾನ್ಯವಾಗಿ ಹಗರಣಗಳು ಇದ್ದರೆ ಸರ್ಕಾರ ಉಳಿಯಲ್ಲ. ನಾವು ಹಗರಣಗಳನ್ನು ಮಾಡಿಲ್ಲ. ನಮ್ಮದನ್ನು ಯಾವುದಾದರೂ ಸಾಬೀತು ಮಾಡಿದ್ದಾರಾ?. ಸಿಎಂ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆಯೇ ಹೊರತು ಒಂದನ್ನು ನಿರೂಪಿಸಿಲ್ಲ ಎಂದು ವ್ಯಂಗ್ಯವಾಡಿದರು.
ತಾಕತ್ತು ಇದ್ದರೆ ಸಾಕ್ಷ್ಯ ಬಿಡುಗಡೆ ಮಾಡಲಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಪಾಪ ಜೋಶಿ ಅವರಿಗೆ ತಾಕತ್ತು ಜಾಸ್ತಿ ಇದೆ. ನಮಗೆ ಸ್ವಲ್ಪ ಕಡಿಮೆ ಇದೆ. ಅವರು ಹೇಳಿರುವುದನೆಲ್ಲ ಬಿಡುಗಡೆ ಮಾಡಲಿ. ತಾಕತ್ತು ಕಡಿಮೆ ಇರುವ ನಾವು ಆ ಮೇಲೆ ಬಿಡುಗಡೆ ಮಾಡುತ್ತೇವೆ. ಸಮಯ ಸಂದರ್ಭ ಬಂದಾಗ ಎಲ್ಲ ಬಿಡುಗಡೆ ಆಗಲಿದೆ. 40 ಪರ್ಸೆಟ್ ಹಗರಣ ಮಾಡಿದ್ದರಿಂದ ಬಿಜೆಪಿ ತಲೆದಂಡ ಆಯಿತು ಎಂದರು.
ಹಿಂದಿನ ರಾಜಕೀಯದ ಬಗ್ಗೆ ಚರ್ಚೆ ಮಾಡೋಣವೆಂದು ಬಹಿರಂಗ ಚರ್ಚೆಗೆ ಚಲುವರಾಯಸ್ವಾಮಿ ಆಹ್ವಾನಕ್ಕೆ ಇದೀಗ ಅದೆಲ್ಲ ಮುಗಿದು ಹೋಗಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಮೊದಲು ಏಕೆ ಮಾತನಾಡಿದರು. ಇದಕ್ಕೆ ಕುಮಾರಸ್ವಾಮಿ ಅವರನ್ನ ಹಿಟ್ ಆ್ಯಂಡ್ ರನ್ ಎನ್ನುವುದು. ಮುಗಿದು ಹೋದ ಮೇಲೆ ಏಕೆ ಮಾತನಾಡಬೇಕಿತ್ತು. ಇವರಿಗೆ ಮಾತ್ರ ಇತಿಹಾಸ ಇದೆ, ಬೇರೆಯವರಿಗೆ ಇತಿಹಾಸ ಇಲ್ಲ. ಬಾಯಿಗೆ ಬಂದಂತೆ ಮಾತನಾಡುವುದಲ್ಲ. ನಾವು ಕೊಳಚೆ ಎಂದು ಮಾತನಾಡಿದ್ದರು. ಹಾಗಿದ್ದರೆ ಅವರಿಗೆ ಸ್ವಾಭಿಮಾನ ಇದ್ದರೆ ಬಹಿರಂಗ ಚರ್ಚೆಗೆ ಬರಬೇಕು ಎಂದು ಸವಾಲೆಸೆದರು.
ಚುನಾವಣೆಗಾಗಿ ಹಣ ಪಡೆದಿರುವ ಎಚ್‌ಡಿಕೆ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಏನು ಖರ್ಚಾಗಿದೆ ಗೊತ್ತಾ?. ಏನು ಖರ್ಚು ಮಾಡಿದ್ದಾರೆ ಆ ಪಕ್ಷದ ನಾಯಕರನ್ನೇ ಕೇಳಿ. ಬಿಜೆಪಿ, ಜೆಡಿಎಸ್‌ನವರ ಜೂತೆ ನಾವು ಓಡಲು ಆಗಲಿಲ್ಲ. ನಮ್ಮ ಬಳಿ ಇಲ್ಲ ಎಂದು ಜನರ ಬಳಿ ಮನವಿ ಮಾಡಿದ್ದೇವೆ. ಗ್ಯಾರಂಟಿ ಕೊಟ್ಟಿದ್ದೇವೆ ಕೈ ಹಿಡಿಯಿರಿ ಎಂದು ಜನರ ಬಳಿ ಹೋಗಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ದುಡ್ಡಲ್ಲಿ ಅವರ ಜತೆ ಫೈಟ್ ಮಾಡಲು ನಮಗೆ ಆಗಲಿಲ್ಲ. ಕುಮಾರಸ್ವಾಮಿ ಅವರಿಗೆ ಬೇರೆ ಸಮಯದಲ್ಲಿ ಹಣ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮಗನ ಚುನಾವಣೆ ಮಗನ ಚುನಾವಣೆ ಎಂದು ಗಿಫ್ಟ್ ಪಡೆದಿದ್ದಾರೆ. ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆಯಲ್ಲಿ ಗೆಲ್ಲಲ್ಲ. ಸಾಕಷ್ಟು ಕಂಪನಿಗಳ ಮೂಲಕ ಚುನಾವಣೆಗೋಸ್ಕರ ಸಾವಿರಾರು ಕೋಟಿ ರೂಗಳನ್ನು ಪಡೆದಿರುವುದು ಸತ್ಯ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದರು.