ಫೋನ್ ಕದ್ದಾಲಿಕೆ ಸಾಬೀತುಪಡಿಸಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಹನಿಟ್ರ್ಯಾಪ್ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಫೋನ್ ಕದ್ದಾಲಿಕೆ ಮಾಡಿದರೆ ಬಿಜೆಪಿ, ಜೆಡಿಎಸ್‌ಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ತಿರುಗೇಟು ನೀಡಿದರು.

ತನ್ನ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಸಿಆರ್‌ಎಸ್, ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ವಿಪಕ್ಷದವರು ಸಾಬೀತುಪಡಿಸಲಿ. ಆನಂತರ ನಾನು ಉತ್ತರ ಕೊಡುತ್ತೇನೆ. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಏನು ಪ್ರಯೋಜನ ಇಲ್ಲ ಎಂದರು.

ಸಿಎಂ ಕುರ್ಚಿಗಾಗಿ ಇದ್ಯಾವುದು ಆಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಯಾವತ್ತೂ ಹೇಳಿಲ್ಲ. ಸಿದ್ದರಾಮಯ್ಯ ಅವರು ಇವತ್ತು ನಾಯಕರು ಮುಂದೆನೂ ನಾಯಕರು. ಸಿಎಂ ಯಾರು ಇರಬೇಕು ಯಾವಾಗ ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರ ಬಿಜೆಪಿಗೆ ಏಕೆ?. ಮೊದಲು ಬಿಜೆಪಿ ಯತ್ನಾಳ್, ರಮೇಶ್, ಪ್ರತಾಪ್ ಸಿಂಹನನ್ನು ಸರಿ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದಿಂದ ಹನಿಟ್ರ್ಯಾಪ್ ಗ್ಯಾರಂಟಿ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ, ಬಿಜೆಪಿಯವರಿಗೆ ಕೈಯಲ್ಲಿ ಏನು ಆಗದೇ ಇದ್ದರೂ ಮಾತಾಡುತ್ತಾರೆ. ಐದು ವರ್ಷದಲ್ಲಿ ಬಿಜೆಪಿ ಕಾರ್ಯಕ್ರಮ ಏನು?. ಇಲ್ಲಸಲ್ಲದ ವಿಚಾರದಲ್ಲಿ ಪ್ರತಿಭಟನೆ ಮಾಡುವುದು ಬಿಡಬೇಕು. ರಾಜ್ಯದ ಜನರಿಗೆ ಅನುಕೂಲವಾಗುವ ವಿಚಾರ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆ ಮಾಡಿಲ್ಲ ಎಂದರು.

ಮುಸ್ಲಿಂ ಮೀಸಲಾತಿ ರಾಜ್ಯ ಸಭೆಯಲ್ಲಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲ ಸಮಾಜಕ್ಕೂ ನ್ಯಾಯ ಕೊಡುತ್ತೇವೆ. ಐದು ಗ್ಯಾರಂಟಿ ಮುಸ್ಲಿಂ ಸಮುದಾಯ ಮಾತ್ರ ತಗೋತಾರಾ?. ನಮ್ಮ ಯೋಜನೆಗಳನ್ನು ಮುಸ್ಲಿಂ ಮಾತ್ರ ತಗೋತಾರಾ?. ಶೇ.99ರಷ್ಟು ಬಡ್ಡಿರಹಿತ ಸಾಲ ತೆಗೆದುಕೊಳ್ಳುವುದು ಯಾರು ಎಂದು ಕೇಳಿ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೊರಟಿದ್ದು ಬಿಜೆಪಿಯವರು. ಮುಸ್ಲಿಂ ಬಗ್ಗೆ ವಿರೋಧ ಮಾಡುತ್ತಿದ್ದ ಬಿಜೆಪಿ ಜತೆ ನಿಲ್ಲಲ್ಲ ಜೆಡಿಎಸ್‌ನವರು ಎಂದಿದ್ದರು. ಅವರಿಬ್ಬರ ಮಧ್ಯೆ ಜಗಳ ಇದೆ. ಸರಿಪಡಿಸುವ ಕೆಲಸವನ್ನ ಅಶೋಕ್ ಮಾಡಲಿ. ಎಲ್ಲರಿಗೂ ಮೀಸಲಾತಿ ಇದೆ. ಕೇಂದ್ರ ಹೊಡೆದು ಹಾಕಲಿ, ಮತಕ್ಕಾಗಿ ಮಾತನಾಡುತ್ತಾರೆ. ಹೊಸ ಕಾನೂನು ತರಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೋಡೋಣ ಎಂದು ಸವಾಲು ಹಾಕಿದರು.

ಮಂಡ್ಯದಲ್ಲಿ ಡಿಕೆಶಿ ವಿರುದ್ಧ ಛತ್ರಿ ಚಳವಳಿಗೆ ಸಂಬಂಧಿಸಿದ ಮಾತನಾಡಿ, ಆಕಸ್ಮಿಕವಾಗಿ ಮಾತನಾಡಿದ್ದಾರೆ, ಸರಿ ಎಂದು ಒಪ್ಪಿಕೊಳ್ಳಲ್ಲ. ನಾನು ಅಥವಾ ಯಾರೇ ಮಾತನಾಡಿದರೂ ತಪ್ಪು. ದೊಡ್ಡ ಪ್ರಮಾಣದಲ್ಲಿ ಮಾತನಾಡುವುದು ಬೇಡ. ಜಿಲ್ಲೆಯ ಜನರಿಗೆ ನೋವಾಗಿದ್ದರೆ ನಾನೇ ವಿಷಾದ ವ್ಯಕ್ತಪಡಿಸುತ್ತೇನೆ. ದಯವಿಟ್ಟು ಹೋರಾಟ ಕೈಬಿಡಿ. ಮಂಡ್ಯ ಜಿಲ್ಲೆಯನ್ನ ಡಿಕೆಶಿ ಅವರು ಕೈ ಬಿಡಲ್ಲ. ಅಸಭ್ಯವಾಗಿ ನಡೆದುಕೊಳ್ಳಲ್ಲ. ಜಿಲ್ಲೆಯನ್ನು ಗೌರವಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net