ಮಂಡ್ಯಕ್ಕೆ ವಿವಿ ಘೋಷಣೆಯಾದರೆ ರೇವಣ್ಣ ಸಹಿಸಿಕೊಳ್ತಾರಾ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಕೃಷಿ ವಿಶ್ವವಿದ್ಯಾನಿಲಯ ಹಾಸನ ಜಿಲ್ಲೆಗೆ ಬರಬೇಕೆನ್ನುವುದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಘೋಷಣೆಯಾಗಿರುವುದನ್ನು ಅವರು ಹೇಗೆ ತಾನೇ ಸಹಿಸಿಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯೊಂದಿಗೆ ಸೇರ್ಪಡೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ರೇವಣ್ಣ ಅಥವಾ ಇನ್ನೊಬ್ಬರು ಮಾತನಾಡುವುದು ಅವರವರ ಇಷ್ಟ. ಮಾತನಾಡುವುದಕ್ಕೆ ಅವರಿಗೆ ಸ್ವತಂತ್ರ ಹಾಗೂ ಹಕ್ಕಿದೆ. ಪಾಪ ರೇವಣ್ಣಗೆ ಹಾಸನಕ್ಕೆ ಕೃಷಿ ವಿವಿ ಬರಬೇಕು ಎನ್ನುವ ಆಸೆ ಇತ್ತು. ಆದ್ದರಿಂದ ಮಂಡ್ಯಕ್ಕೆ ಕೃಷಿ ವಿವಿ ಬಂದಿರುವುದನ್ನು ಹೇಗೆ ಸಹಿಸುತ್ತಾರೆ ಎಂದರು.

ಮಂಡ್ಯವನ್ನ ಅವರು ರಾಜಕೀಯವಾಗಿ ಉಪಯೋಗಿಸಿಕೊಳ್ಳಬಹುದು. ಆದರೆ ಮಂಡ್ಯವನ್ನ ಸಹಿಸುವುದಕ್ಕೆ ರೇವಣ್ಣನಿಗೆ ಆಗಲ್ಲ. ಮಂಡ್ಯಕ್ಕೆ ಐಐಟಿ ಬಂದಿತ್ತು, ಆಗ ಹಾಸನಕ್ಕೆ ಕೇಳಿದ್ದರು. ಕೊನೆಗೆ ನಮ್ಮ ಕಿತ್ತಾಟಕ್ಕೆ ಐಐಟಿ ರಾಯಚೂರಿಗೆ ಹೋಯಿತು. ಜೆಡಿಎಸ್‌ನವರಿಗೆ ಮಂಡ್ಯದವರ ಮತ ಬೇಕು ಅಷ್ಟೇ. ಅದೇ ಕೃಷಿ ವಿವಿ ಆಗುವುದು ಇಷ್ಟ ಇಲ್ಲ. ಈ ಬಗ್ಗೆ ಹೋರಾಟ ಮಾಡಿದರೇ ಮಾಡಲಿ, ಬೇಡ ಎಂದವರು ಯಾರು ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಚಿವ ಸಿಆರ್‌ಎಸ್, ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ, ಗುಣಮಟ್ಟ, ಪದವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೌಲ್ಯ ಹೊಂದಿದೆ. ಅದನ್ನ ವಿಭಜಿಸಿದ ಪರಿಣಾಮ ವಿವಿಯ ಗಂಭೀರತೆ ಕಡಿಮೆ ಆಗಿದೆ. ಐದು ವರ್ಷದಲ್ಲಿ ಮಂಡ್ಯ ವಿವಿ ಸಂಪೂರ್ಣ ಸ್ವತಂತ್ರವಾಗಿಲ್ಲ. ಮಾತ್ರವಲ್ಲದೆ ಯುಜಿಸಿಯಿಂದ ಅನುದಾನ ಸರಿಯಾಗಿ ಬರಲ್ಲ. ಆದ್ದರಿಂದ ಮಂಡ್ಯ ವಿವಿಯನ್ನ ಮೈಸೂರು ವಿವಿಗೆ ಮತ್ತೆ ಸೇರಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಅದಕ್ಕಾಗಿ ಸಿಎಂ ಸಮಿತಿಯೊಂದನ್ನು ಮಾಡಿದ್ದಾರೆ. ಆ ಸಮಿತಿ ಇನ್ನೂ ವರದಿಯನ್ನ ಸಲ್ಲಿಸಿಲ್ಲ. ಸದನದಲ್ಲಿ ಆ ಕುರಿತು ಚರ್ಚೆಯಾಗಿದೆ. ಸಚಿವ ಸಂಪುಟದಲ್ಲಿ ಸಭೆ ಮಾಡಿದ ಬಳಿಕ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನ ಕುಡಿಯುವ ನೀರಿಗಾಗಿ ಕಾವೇರಿ 6 ನೇ ಹಂತದ ಯೋಜನೆಗೆ ಜೆಡಿಎಸ್ ವಿರೋಧಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ವಿಶ್ವ ವಿಖ್ಯಾತ ನಗರ. ಮಂಡ್ಯ ಸೇರಿದಂತೆ ಎಲ್ಲರೂ ಅಲ್ಲಿ ವಾಸಿಸುತ್ತಾರೆ. ದೆಹಲಿ ಬಿಟ್ಟರೇ ಬೆಂಗಳೂರು ನಗರವೇ ಆಕರ್ಷಣೆ. ಆದರೆ ರೈತರಿಗೂ ತೊಂದರೆಯಾಗದಂತೆ ನೀರು ಒದಗಿಸುವುದು ನಮ್ಮ ಪ್ರಯತ್ನ. ವ್ಯರ್ಥವಾಗುತ್ತಿರುವ ನೀರನ್ನು ತಡೆದು ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು. ಆ ಕುರಿತು ಸಿಎಂ ಗಮನಕ್ಕೂ ನಾವು ತಂದಿದ್ದೇವೆ. ಜೆಡಿಎಸ್‌ನವರು ರಾಜಕಾರಣ ಬೆರೆಸುತ್ತಾರೆ. ನಾವು ರಾಜಕಾರಣ ಬೆರೆಸುವುದಕ್ಕೆ ಆಗುತ್ತಾ ಎಂದರು.

ಸಚಿವ ರಾಜಣ್ಣ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಚಲುವರಾಯಸ್ವಾಮಿ, ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ನಮ್ಮ ಭಾಗ್ಯ. ವಿಷಯ ಇಲ್ಲದಿದ್ದರೂ ಅವರನ್ನ ನಾವು ಭೇಟಿ ಮಾಡುತ್ತೇವೆ. ಅವರನ್ನ ಭೇಟಿಯಾಗುವುದೇ ನಮಗೆ ಖುಷಿ. ರಾಜಣ್ಣ ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಅದೇ ರೀತಿ ಭೇಟಿ ಮಾಡುವುದು ತಪ್ಪಲ್ಲ. ಖರ್ಗೆಯವರು ಸೂಕ್ತ ಸಮಯಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾವೇಕೆ ಮಾತನಾಡಲಿ. ನಾನು ಹಾಸನಕ್ಕೆ ಹೆಚ್ಚು ಪ್ರವಾಸ ಮಾಡುತ್ತೇನೆಂದು ಅಲ್ಲಿಯೇ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆಂದು ಯಾರಾದರೂ ಹೇಳಿದ್ದಾರಾ?. ರಾಜ್ಯದ ಎಲ್ಲ ಜಿಲ್ಲೆಯೂ ನನಗೆ ಒಂದೇ ಎಂದರು. ರಾಜಣ್ಣ ಅಧ್ಯಕ್ಷರಾದರೆ ನಿಮಗೆ ಹಾಸನ ಜಿಲ್ಲೆ ಉಸ್ತುವಾರಿಯಂತೆ ಎಂಬ ಮಾಧ್ಯಮವರ ಪ್ರಶ್ನೆಗೆ ರಾಜಣ್ಣ ಅಧ್ಯಕ್ಷ ಸ್ಥಾನವನ್ನ ಕೇಳಿಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಆರ್‌ಎಸ್, ಅವರು ಆಗಿಲ್ಲ ಅದಕ್ಕೆ ಆ ರೀತಿ ಹೇಳಿರುತ್ತಾರೆ. 2018ರಲ್ಲಿ ಬಹುಮತ ಬರಲ್ಲ ಎಂದರೇ ಪಕ್ಷವನ್ನೆ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆಮೇಲೆ ಕುಮಾರಸ್ವಾಮಿ ಏನು ಮಾಡಿದ್ದರು. ಎಚ್‌ಡಿಕೆ ಪೂರ್ಣಾವಧಿ ಸಿಎಂ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಬೇರೆಯವರಿಗೂ ಹೇಳುತ್ತಾರೆ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರೆ, ಅದು ಎಂ.ಬಿ.ಪಾಟೀಲ್ ಅವರ ಅಭಿಪ್ರಾಯ. ಅದೇ ರೀತಿ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಅಂತಿಮ ತೀರ್ಮಾನವನ್ನು ನಮ್ಮ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net