ಜೋಕರ್ ಪದ ಎಚ್‌ಡಿಕೆಗೆ ಸೂಕ್ತ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Chaluvarayaswamy criticism against HDK Mandya
Published on

ಮಂಡ್ಯ: ಜೋಕರ್ ಪದ ನನಗಿಂತ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಮಿ ಆಟದಲ್ಲಿ ಜೋಕರ್ ಅನ್ನ ಯಾವುದಕ್ಕಾದರೂ ಸೇರಿಸಬಹುದು. ಆಡಳಿತಕ್ಕಾಗಿ ಯಾರ ಜತೆ ಬೇಕಾದರೂ ಹೋಗುವ ಅವರು ಜೋಕರಾ?, ಅಥವಾ ನಾನು ಜೋಕರಾ?. ಆದ್ದರಿಂದ ಆ ಪದಕ್ಕೆ ಅವರೇ ಹೆಚ್ಚು ಸೂಕ್ತ ಎನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಐಐಟಿ ಪದಕ್ಕೆ ಅರ್ಥ ಗೊತ್ತಿದೆಯೇ ಎನ್ನುವ ಮಾತಿಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಮಂಡ್ಯಕ್ಕೆ ಐಐಟಿ ತರಲು ಅವರು ಪತ್ರ ಬರೆದಿದ್ದಾರಾ?. ಅವರ ತಂದೆ ಪ್ರಧಾನಮಂತ್ರಿ, ನನ್ನ ತಂದೆ ರೈತ. ನಾನು ಜಿ.ಪಂ ಸದಸ್ಯನಿಂದ ರಾಜಕಾರಣ ಮಾಡಿದ್ದೇನೆ. ನನಗೆ ಜನರ ಕಷ್ಟ ಗೊತ್ತಿದೆ. ಅವರು ನನ್ನ ಮಂತ್ರಿ ಮಾಡಿದ್ದೇನೆ ಎನ್ನುವುದಾದರೆ, ನಾನು ಅವರನ್ನು ಸಿಎಂ ಮಾಡಿದ್ದೀನಿ ಎನ್ನುವುದು ತಪ್ಪಲ್ಲ. ಕುಮಾರಸ್ವಾಮಿಗೆ ಸಿದ್ದರಾಮಯ್ಯ, ಡಿಕೆಶಿ, ಚಲುವರಾಯಸ್ವಾಮಿ ಬೈಯ್ಯುವ ಚಪಲ. ಆದ್ದರಿಂದ ಅವರ ಬಗ್ಗೆ ಮಾತನಾಡಿ ನಾಲಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದರು.

ಕುಮಾರಸ್ವಾಮಿಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ. ಎಚ್‌ಡಿಕೆ ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ವಾ, ಇಲ್ವಾ ಎನ್ನುವುದನ್ನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತಾರಾ?. ಕುಮಾರಸ್ವಾಮಿ ಕಂಡರೆ ನಾನು ಬೆಚ್ಚಿ ಓಡಿಹೋಗಲ್ಲ. ಕುಮಾರಸ್ವಾಮಿ ಹುಟ್ಟುತ್ತಾ ಶ್ರೀಮಂತರಾ?. ಹಾಗಾದರೆ ವೈಟ್ ಪೇಪರ್‌ನಲ್ಲಿ ಬರೆದು ಕೊಡಲಿ ನೋಡೋಣ. ಹೈಕೋರ್ಟ್ ಆದೇಶದಂತೆ ಅವರು ಮಾಡಿದ್ದ ಒತ್ತುವರಿ ತೆರವು ಮಾಡಿದ್ದೇವೆ ಎಂದು ಕೇತಗಾನಹಳ್ಳಿಯಲ್ಲಿ ಒತ್ತುವರಿ ತೆರವು ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿದರು.

ನನ್ನನ್ನ ಪದೇ ಪದೇ ಕೆಣಕಿದರೆ ಹೆದರಿ ಹೋಗಲ್ಲ. ಮುಖಾಮುಖಿ ಚರ್ಚೆಗೆ ತಯಾರಿದ್ದೇನೆ. ಅವರು ನಿದ್ರೆ ಮಾಡದೆ ಏಕೆ ಹೋಗುತ್ತಿದ್ದರು ಎಂದರೆ ಅವರ ವೈಯಕ್ತಿಕ ಸಮಸ್ಯೆಗಳು. ಚಟಗಳ ಬಗ್ಗೆ ಆತ್ಮಸಾಕ್ಷಿ ಕೇಳಿಕೊಳ್ಳಲಿ. ನನ್ನ ಚರಿತ್ರೆ ಅವರ ಚರಿತ್ರೆ ಚರ್ಚೆಯಾಗಲಿ. ಮಂಡ್ಯದಲ್ಲಿ ನಾನು ಗೆದ್ದಾಗ ಜೆಡಿಎಸ್‌ಗೆ 4 ಕಡೆ ಠೇವಣಿ ಇರಲಿಲ್ಲ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಕೇಸ್. ಅವರ ಬಗ್ಗೆ ಗೊತ್ತಿದೆ. ಆದ್ದರಿಂದ ಮಾತನಾಡಿ ಪ್ರಯೋಜನ ಇಲ್ಲ ಎಂದು ಹೇಳಿದರು.

ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಅವಕಾಶ ಇದೆ. ವಿರೋಧ ಪಕ್ಷ, ಸರಿಯೋ ತಪ್ಪೋ ಯಾವುದಾದರೊಂದು ಚಟುವಟಿಕೆಯಲ್ಲಿರಬೇಕು. ಮುಡಾ ಕೇಸ್‌ನಲ್ಲಿ ಹಿನ್ನಡೆ ಅನುಭವಿಸಿದರು. ಯಾವ ವಿಚಾರದಲ್ಲಿ ಅವರಿಗೆ ಸ್ಪಂದನೆ ಸಿಕ್ಕಿಲ್ಲ. ಈಗ ಬೆಲೆ ಏರಿಕೆ ವಿಚಾರ ಮುಂದೆ ತಂದಿದ್ದಾರೆ. ಗ್ಯಾಸ್ ಬೆಲೆ ಏರಿಸಿದ್ದು ಯಾರು?. ಪೆಟ್ರೋಲ್, ಡೀಸೆಲ್ ಏರಿಸಿದ್ದು ಯಾರು?. ಕೇಂದ್ರ ಸರ್ಕಾರದ ಬೆಲೆ ಏರಿಸಿದಾಗ ರಾಜ್ಯ ಸರ್ಕಾರವೂ ಏರಿಸಲೇಬೇಕು, ಅದು ಅನಿವಾರ್ಯ. ನಾವು ಗ್ಯಾರಂಟಿಗಾಗಿ ಬೆಲೆ ಏರಿಕೆ ಮಾಡಿಲ್ಲ. ಅಭಿವೃದ್ಧಿ ಕೆಲಸಗಳಿಗಾಗಿ ಬೆಲೆ ಏರಿಕೆ ಸಹಜ. ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಹೊಲಿಕೆ ಮಾಡಿದರೆ ರಾಜ್ಯ ಅಷ್ಟು ಪ್ರಮಾಣದ ಬೆಲೆ ಏರಿಕೆ ಮಾಡಿಲ್ಲ. ವಿರೋಧ ಪಕ್ಷದ ನಾಯಕರು ಅಸ್ಥಿತ್ವ ಉಳಿಸಿಕೊಳ್ಳಲು ಮಾತನಾಡಿದರೆ ಏನು ಮಾಡಲು ಆಗಲ್ಲ ಎಂದರು.

ಡಿಸೆಂಬರ್‌ನಲ್ಲಿ ಸಿಎಂ ಬದಲಾವಣೆ ಎಂಬ ಚನ್ನಗಿರಿ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಡಿಕೆ ಅಥವಾ ಹೈಕಮಾಂಡ್ ಆ ಮಾತನ್ನು ಹೇಳಿದರೆ ಅಧಿಕೃತ. ಬೇರೆ ಯಾರೇ ಹೇಳಿದರೂ ಅಧಿಕೃತ ಅಲ್ಲ. ಬದಲಿಗೆ ಅವರು ಅಭಿಪ್ರಾಯ ಹೇಳಬಹುದು ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net