

ಮಂಡ್ಯ: ಏನಾದರೂ ಹೆಚ್ಚು ಕಡಿಮೆಯಾದರೆ ಕೇಂದ್ರ ಸರ್ಕಾರವೇ ಅಳ್ಳಾಡಬಹುದೇ ಹೊರತು ರಾಜ್ಯಸರ್ಕಾರವಲ್ಲ. ನಮಗೆ ಬಹುಮತವಿದೆ. ಆದ್ದರಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂತಹ ಮಾತನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರವೆಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದಿದ್ದಾರೆ. ಎಚ್‌ಡಿಕೆ ಭವಿಷ್ಯ ಹೇಳುತ್ತಾರೆ ಎಂದು ಹೇಳಿದ್ದೆ. ಆದ್ದರಿಂದ ಯಾರಿಗಾದರೂ ಭವಿಷ್ಯ ಬೇಕಿದ್ದರೆ ಅವರ ಬಳಿ ಹೋಗುವುದಕ್ಕೆ ಹೇಳೋಣ. ಎಚ್‌ಡಿಕೆಗೆ ರಾತ್ರಿ ಕನಸು ಬೀಳಬಹುದು ಎಂದು ವ್ಯಂಗ್ಯವಾಡಿದರು.
ಅಧಿಕಾರದಲ್ಲಿರುವ ಸರ್ಕಾರ ತೆಗೆಯಬೇಕು, ಮತ್ತೆ ಏನಾದರೂ ಮಾಡಬೇಕು ಎಂಬುದೇ ಅವರ ಕೆಲಸ. ನಮ್ಮ ಪಕ್ಷದವರೆಲ್ಲ ಅವರ ಮನೆಯಲ್ಲಿ ಇದ್ದಾರಾ?. ಕೆಲವರಿಗೆ ಚಪಲ, ನಾವು ಏನು ಮಾಡುವುದಕ್ಕೆ ಆಗಲ್ಲ. ಮಾಜಿ ಸಿಎಂ, ಕೇಂದ್ರ ಸಚಿವರಾದವರು ಈ ರೀತಿ ಹೇಳುವುದು ದೊಡ್ಡ ಅಪರಾಧ. ರಾಜ್ಯದ ಜನರು 136 ಶಾಸಕರನ್ನ ಜನ ಸುಮ್ಮನೆ ಆಯ್ಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಇರಲ್ಲ ಎಂದು ಇವತ್ತು ಹೇಳಿಲ್ಲ. ಬದಲಿಗೆ ಸರ್ಕಾರ ರಚನೆಯಾದ ದಿನದಿಂದಲೂ ಹೇಳುತ್ತಿದ್ದಾರೆ. 123 ಕ್ಷೇತ್ರ ಗೆಲ್ಲುತ್ತೇವೆ, ಇಲ್ಲ ಎಂದರೆ ರಾಜೀನಾಮೆ ಮಾಡಿ ಪಕ್ಷ ವಿಸರ್ಜನೆ ಮಾಡುತ್ತೇನೆಂದು ಹೇಳುತ್ತಲೇ ಇದ್ದಾರೆ. ರಾಜಕೀಯದಿಂದಲೇ ದೂರ ಹೋಗುತ್ತೇನೆ ಎಂದು 2018, 2023ರಲ್ಲೂ ಹೇಳಿದ್ದರು. ಆ ರೀತಿ ನಡೆದುಕೊಂಡಿದ್ದಾರೆ. ಇನ್ನು ಈಗ ಚುನಾವಣೆ ಆಗುತ್ತಾ?. ರಾಜ್ಯದಲ್ಲಿ ಯಾವತ್ತೂ ಬಿಜೆಪಿ 113 ಕ್ಷೇತ್ರ ಹಾಗೂ 30 ವರ್ಷದಿಂದ ಜೆಡಿಎಸ್ 50 ಕ್ಷೇತ್ರ ದಾಟಿಲ್ಲ. ಹಾಗಿದ್ದ ಮೇಲೆ ಯಾವ ರೀತಿ ಸರ್ಕಾರ ಮಾಡುತ್ತಾರೆ. ನಮ್ಮ 136 ಶಾಸಕರನ್ನ ಹೊತ್ತುಕೊಂಡು ಹೋಗುವುದಕ್ಕೆ ಆಗುತ್ತಾ. ಅದೆಲ್ಲ ಆಗದಿರುವ ಕೆಲಸ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎನ್ನುವ ಎಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್‌ನವರು ಕಿವಿಗೆ ಹೂವು ಮುಡಿದುಕೊಂಡಿದ್ದಾರೆ. ನಮ್ಮನ್ನ ಕೇಳಿ ಮೈತ್ರಿ ಮಾಡಿಕೊಂಡಿದ್ದಾರಾ?. ಅಥವಾ ನಮ್ಮ ಮಾತಿನ ಮೇಲೆ ಮಂತ್ರಿ ಮಾಡಿದ್ದಾರಾ?. ವಿಚಾರಾಧಾರಿತವಾಗಿ ನಾವೂ ಅವರ ಪಕ್ಷದ ಬಗ್ಗೆ ಮಾತನಾಡುತ್ತೇವೆ. ಅದು ರಾಜಕಾರಣ. ಹುಳಿ ಹಿಂಡುವುದು ಎಂದರೆ ಏನು?. ಚುನಾವಣೆಯನ್ನ ನಾವು ಅವರು ಹೆದರಿಸಬೇಕೇ ಹೊರತು, ಅವರ ಪಕ್ಷದ ತೀರ್ಮಾನದಲ್ಲಿ ನಮ್ಮದೇನು ಇಲ್ಲ. ಮೈತ್ರಿಯಲ್ಲಿ ವ್ಯತ್ಯಾಸ ಇದೇ ಎಂದು ಅವರೇ ಹೇಳಿದ್ದಾರೆ. ಬಹಳ ಅನ್ಯೋನ್ಯವಾಗಿದ್ದಾರೆ ಎಂದುಕೊಂಡಿದ್ದೆವು. ವ್ಯತ್ಯಾಸ ಇರುವುದು ನಮಗೆ ಗೊತ್ತಿರಲಿಲ್ಲ ಎಂದು ಛೇಡಿಸಿದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಸಿಎಂ, ಡಿಸಿಎಂ ಸಭೆ ಮಾಡಿದ್ದರು. ಮೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ತುಕಾರಾಂ ಮನೆಯವರು ಸ್ಪರ್ಧೆ ಮಾಡುತ್ತಾರೆ. ಉಳಿದೆರಡು ಕ್ಷೇತ್ರದ ಮಾಹಿತಿಯನ್ನು ತೆಗೆದುಕೊಂಡಿದ್ದಾರೆ. ಚನ್ನಪಟ್ಟಣ ಜವಾಬ್ದಾರಿಯನ್ನ ನನಗೆ ಕೊಟ್ಟಿದ್ದರು. ಅದರಂತೆ ಕ್ಷೇತ್ರದ ಮುಖಂಡರ ಅಭಿಪ್ರಾಯದ ವರದಿ ನೀಡಿದ್ದೇವೆ. ಸಿಎಂ, ಡಿಸಿಎಂ ತೀರ್ಮಾನ ಮಾಡಿ ಎಐಸಿಸಿಗೆ ಪಟ್ಟಿ ಕಳಿಸುತ್ತಾರೆ. ರಾಮನಗರ ಜಿಲ್ಲೆಯವರೇ ಚನ್ನಪಟ್ಟಣ ಅಭ್ಯರ್ಥಿ ಆಗುತ್ತಾರೆ ಎಂದರು.
ಸಿ.ಪಿ.ಯೋಗೇಶ್ವರ್ ಸೆಳೆಯುವ ಪ್ರಯತ್ನ ನಾವು ಮಾಡಿಲ್ಲ. ಅವರು ನಮ್ಮ ಜತೆಗೆ ಮಾತನಾಡಿಲ್ಲ, ನಾವೂ ಅವರೊಂದಿಗೆ ಮಾತನಾಡಿಲ್ಲ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಅಭ್ಯರ್ಥಿ ಮಾಡುವಂತೆ ಒತ್ತಡ ಇದೆ. ಅದಲ್ಲದೆ ಪುಟ್ಟಣ್ಣ, ಅಶ್ವಥ್, ರಘುನಂದನ್ ರಾಮಣ್ಣ ಪಟ್ಟಿಯಲ್ಲಿ ಇದ್ದಾರೆ. ಅಂತಿಮ ತೀರ್ಮಾನ ಸಿಎಂ, ಡಿಸಿಎಂ ಮಾಡುತ್ತಾರೆ. ಚನ್ನಪಟ್ಟಣ ಜೆಡಿಎಸ್‌ಗೆ ಎಂದೇಳಿ ಬಿಜೆಪಿಯವರು ಕೈ ತೊಳೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೂಡ ಶೀಘ್ರ ತೀರ್ಮಾನ ಆಗಬಹುದು. ಜೆಡಿಎಸ್ ಚಿಹ್ನೆಯಲ್ಲಿ ಯೋಗೇಶ್ವರ್ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕಿದ್ದು, ಅವರು ಒಪ್ಪಿಗೆ ಕೊಡುವ ಪರಿಸ್ಥಿತಿ ಇದೆ ಎನ್ನುತ್ತಾರೆ. ಮತ್ತೊಂದು ಕಡೆ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧೆ ಮಾಡಬಹುದು ಎನ್ನುವುದಿದೆ. ಆದರೆ ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಅವರ ಪಕ್ಷದಲ್ಲಿ ಏನಾಗಿದೆ ಎಂದೂ ನನಗೆ ಗೊತ್ತಿಲ್ಲ ಎಂದರು.