ಬಾಯಿಗೆ ಹಿಡಿತವಿಲ್ಲದೆ ಮಾತನಾಡುವ ಎಚ್‌ಡಿಕೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

Minister N.Cheluvarayaswamy
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿ, ಒಳ್ಳೆಯ ಕೆಲಸಕ್ಕೆ ರಾಜ್ಯಕ್ಕೆ ಬರಬೇಕು. ಆದರೆ ಅವರಿಗೆ ಕೇಂದ್ರದ ಕೆಲಸ ಮುಖ್ಯ ಅಲ್ಲ. ವಾರಕ್ಕೆ ಮೂರು ದಿನ ಬೆಂಗಳೂರಿಗೆ ಬಂದು ಅವರಿವರ ಬಗ್ಗೆ ಬಾಯಿಗೆ ಹಿಡಿತ ಇಲ್ಲದೆ ಮಾತನಾಡುವುದಷ್ಟೇ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಎಚ್‌ಡಿಕೆ ಬಳಸುವ ಮಾತು ಸರಿಯಲ್ಲ. ಅವರ ಮಾತನ್ನು ದೇವೇಗೌಡರು ಸರಿ ಎಂದರೆ ನಾನು ಒಪ್ಪುತ್ತೇನೆ. ಅರ್ಜುನನ ಹಿಂದೆ ಕೃಷ್ಣ ಹೇಗಿದ್ದರೋ, ಹಾಗೇ ಕುಮಾರಸ್ವಾಮಿ ಅವರಿಗೆ ದೇವೇಗೌಡರು ಇದ್ದಾರೆ. ಅದಕ್ಕೆ ಮಾತನಾಡುತ್ತಿದ್ದಾರೆ. ಒಂದು ದಿನ ಪ್ರತಿಫಲ ಸಿಗಲಿದೆ ಎಂದರು.

ನನ್ನ ಸ್ನೇಹಿತ ಕುಮಾರಸ್ವಾಮಿ ಹೇಳಿದರೂ ಕೇಳಲ್ಲ, ಅವರೇ ಅನುಭವಿಸುತ್ತಾರೆ ಬಿಡಿ. ಮುಡಾ ನಿವೇಶನ ವಾಪಸ್ ನೀಡಿದ್ದು ಸಿದ್ದರಾಮಯ್ಯ ನಿಲುವು ಅಲ್ಲ, ಅವರ ಪಾತ್ರವೂ ಇಲ್ಲ. ಅವರ ಪತ್ನಿ ವಾಪಸ್ ಕೊಟ್ಟಿದ್ದಾರೆ ಅಷ್ಟೆ. ಅದಕ್ಕೆ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಂದು ಅಲ್ಲ. ಹಾಗೆ ನೋಡಿದರೆ ಕುಮಾರಸ್ವಾಮಿ ಅವರ ವಿರುದ್ಧ ತನಿಖೆ ಆಗಿ ಸಾಬೀತಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿಗಾಗಿ ರಾಜ್ಯಪಾಲರ ಬಳಿಗೆ ಹೋಗಿದ್ದಾರೆ. ಅದಕ್ಕೆ ಉತ್ತರ ಕೊಡಲಿ. ಎಚ್‌ಡಿಕೆ ಕೂಡ ಜಾಮೀನಿನ ಮೇಲೆ ಇದ್ದಾರೆ ಎಂದು ಟೀಕಿಸಿದರು.

ವಿರೋಧ ಪಕ್ಷದವರು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದರೆ ಪಕ್ಕದ ತಟ್ಟೆ ನೋಡುತ್ತಾರಂತೆ. ಮುಡಾದಲ್ಲಿ ನೂರಾರು ಜನ ಫಲಾನುಭವಿಗಳಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷದವರು ಇದ್ದಾರೆ. ಸರ್ಕಾರದ ಅನುಮೋದನೆ ಇಲ್ಲದೆ ಅನಧಿಕೃತವಾಗಿ ಸೈಟ್ ಮಾಡಿದ ಬಹಳಷ್ಟು ಜನ ಇದ್ದಾರೆ. ತನಿಖೆ ಬಳಿಕ ಎಲ್ಲವೂ ಸತ್ಯ ಹೊರಗೆ ಬರಲಿದೆ. 15, 20, 30, 50 ಸೈಟ್ ತೆಗೆದುಕೊಂಡಿದ್ದಾರೆ. ಎಲ್ಲವೂ ಹೊರಗೆ ಬರಲಿದೆ. ಆದ್ದರಿಂದ ತಾಳ್ಮೆ ತೆಗೆದುಕೊಳ್ಳಲಿ. ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮಗೆ ಅವರ ಅಣ್ಣ ಕೊಟ್ಟಿದ ಜಾಗ. ಕಾನೂನು ಬದ್ಧವಾಗಿ ಬದಲಿ ಜಾಗ ಕೇಳಿದ್ದರು. ತಪ್ಪಾಗಿದ್ದರೆ ಕೊಟ್ಟವರ ತಪ್ಪಾಗಲಿದೆಯೇ ವಿನಃ ತೆಗೆದುಕೊಂಡವರದು ಆಗಲ್ಲ. ಅರ್ಜಿ ಕೊಟ್ಟಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ಅಂದಿನ ಸರ್ಕಾರ ಹಾಗೂ ಮುಡಾ. ಸಿದ್ದರಾಮಯ್ಯ ಕಾಲದಲ್ಲಿ ಕೊಟ್ಟಿರುವ ನಿವೇಶನ ಅಲ್ಲ. ಜನರಿಗೆ ಇದೆಲ್ಲ ಅರ್ಥವಾಗಿದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್ ಸರ್ಕಾರ ಇರಬಾರದು ಅಷ್ಟೇ. ಅವರಿಗೆ ಮುಖ್ಯಮಂತ್ರಿ ಮೇಲಿರುವ ಜನರ ಪ್ರೀತಿಯನ್ನ ಸಹಿಸಲಾಗುತ್ತಿಲ್ಲ. 136 ಕ್ಷೇತ್ರ ಗೆದ್ದಿರುವುದು ಬಿಜೆಪಿ ಮತ್ತು ಜೆಡಿಎಸ್‌ಗೆ ಕಣ್ಣು ಕುಕ್ಕುತಿದೆ. ಏನು ಸಿಗದ ಕಾರಣ, ಈ ವಿಚಾರ ಎತ್ತಿದ್ದಾರೆ. ಅಂತಿಮವಾಗಿ ಅವರಿಗೆ ಫಲ ಸಿಗಲ್ಲ. ಕಾನೂನು ರೀತಿಯಲ್ಲಿ ಎದುರಿಸುತ್ತೇವೆ. ಕುಮಾರಸ್ವಾಮಿ ಜತೆ ಇದ್ದು ರಾಜಕೀಯ ವಿಚಾರ ನೋಡಿದ್ದೇವೆ. ಯಾವ ವಿಚಾರವನ್ನು ಅವರು ಪೂರ್ಣಗೊಳಿಸುವುದಿಲ್ಲ. ಸಿದ್ದರಾಮಯ್ಯ ಪತ್ನಿ ನಿವೇಶನ ವಾಪಸ್ ಕೊಟ್ಟಿದ್ದಾರೆ. ಅದಕ್ಕೆ ಹಿಟ್ ಆ್ಯಂಡ್ ರನ್, ಯೂಟರ್ನ್ ಎಂದರೆ ಏನು ಅರ್ಥ?. ಅವರ ಕುಟುಂಬ ಪರಿಸ್ಥಿತಿ ನೋಡಿ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಾರೆ. ಪಾಪಾ ಕುಮಾರಸ್ವಾಮಿ, ಈಗ ಎಡಿಜಿಪಿ ಚಂದ್ರಶೇಖರ್ ಮೇಲೆ ಬಿದ್ದಿದ್ದಾರೆ. ಕಾನೂನಿನಲ್ಲಿ ಅಧಿಕಾರಿಗಳಿಗೆ ಒಂದು ಲಿಮಿಟೆಷನ್ ಇದೆ. ಅವರು ಕೂಡ ಈ ದೇಶದ ಪ್ರಜೆ. ಏನು ಬೇಕಾದರೂ ಮಾತನಾಡಬಹುದಾ?. ಕಾನೂನಾತ್ಮಕ ವಿಚಾರವನ್ನು ಅಧಿಕಾರಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಮೊದಲು ಎದುರಿಸಲಿ ಎಂದು ವಾಗ್ದಾಳಿ ನಡೆಸಿದ ಅವರು, ಸಿಎಂ ಸ್ಥಾನಕ್ಕೆ ಪೈಪೋಟಿ ಬಿದ್ದಿದ್ದಾರೆ ಎಂಬುದೆಲ್ಲ ಸೃಷ್ಟಿ. ಮುಡಾ ವಿಚಾರದ ಬಗ್ಗೆ ಸಚಿವರು ಸಭೆ ಮಾಡುತ್ತಾರೆ ಅಷ್ಟೆ. ಎಐಸಿಸಿಯೂ ಮುಖ್ಯಮಂತ್ರಿ ರಾಜೀನಾಮೆ ಇಲ್ಲ ಎಂದು ಹೇಳಿದೆ. ಬಿಜೆಪಿ-ಜೆಡಿಎಸ್ ಆರೋಪದ ಬಗ್ಗೆ ಸಭೆ ಮಾಡಲಾಗಿದೆ. ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗಂಗಾರತಿ ಮಾದರಿ ಕಾವೇರಿ ಆರತಿ ವಿಚಾರ ಇನ್ನು ಪ್ರಕ್ರಿಯೆ ನಡೆಯುತ್ತಿದೆ. ಸಂಪೂರ್ಣವಾಗಿ ತೀರ್ಮಾನ ಡಿಸಿಎಂ ಮಾಡುತ್ತಾರೆ. ಶಾಶ್ವತವಾಗಿ ಕಾವೇರಿ ಆರತಿ ನಡೆಯಬೇಕು. ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದಷ್ಟೂ ಬೇಗ ಕಾವೇರಿ ಆರತಿಗೆ ಜಾಗ ಗುರ್ತಿಸಿ ತೀರ್ಮಾನ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಕಾರ್ಯಕ್ರಮವಾಗಿದೆ ಎಂದರು.

ಶಾಸಕ ರವಿಕುಮಾರ್ ಗಣಿಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net