ದಿನವೂ ಕೆದಕಿದರೆ ಏನು ಮಾಡೋಕ್ಕಾಗುತ್ತೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪ

Minister-N.Cheluvarayaswamy
Published on

ಮಂಡ್ಯ: ಘರ್ಷಣೆಗೆ ಜೆಡಿಎಸ್‌ನ ಕೆಲವರು ಕುಮ್ಮಕ್ಕು ಕೊಡಲು ನಿಂತಿದ್ದಾರೆ. ಅವರ ತಾಳಕ್ಕೆ ಸಂಸದರು ಸ್ಪಂದಿಸುತ್ತಿದ್ದಾರೆ. ತಣ್ಣಗಿರುವ ವಿಷಯವನ್ನು ದಿನವೂ ಕೆದಕುತ್ತಿದ್ದಾರೆ. ನಾನು ಏನು ಮಾಡೋಕ್ಕಾಗುತ್ತೆ. ಅವರಿಗೆ ಅವರೇ ಪರಿಹಾರ ಹುಡುಕಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಕೆರಗೋಡು ಗ್ರಾಮದಲ್ಲಿ ಶುರು ಮಾಡಿದರು. ಕೆ.ಆರ್.ಪೇಟೆ, ಪಾಂಡವಪುರದಲ್ಲಿ ಪ್ರಯತ್ನ ಮಾಡಿದರು. ಅದ್ಯಾವುದು ಸಕ್ಸಸ್ ಆಗಲಿಲ್ಲ. ಈಗ ಮತ್ತೆ ನಾಗಮಂಗಲಕ್ಕೆ ಪದೇ ಪದೇ ಬರುತ್ತಿದ್ದಾರೆ. ಆದರೂ ಅದು ಮುಗಿದು ಹೋಗಿರುವ ವಿಚಾರ. ಅದನ್ನು ಇಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ ಎಂದರು.

ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡುತ್ತೇವೆ. ಬಂಧಿತರಿಗೆ ಜಾಮೀನು ಕೊಡಿಸುವ ಕೆಲಸವನ್ನು ನಮ್ಮ ಹುಡುಗರು ಮಾಡುತ್ತಿದ್ದಾರೆ. ಮತ್ತೆ ಯಾರನ್ನು ಅರೆಸ್ಟ್ ಮಾಡಿಲ್ಲ. ನಾಗಮಂಗಲದಲ್ಲಿ ಹಿಂದು ಮತ್ತು ಮುಸ್ಲಿಂ ಒಗ್ಗಟ್ಟಿನಿಂದ ಇದ್ದಾರೆ. ಶಾಂತಿ ಸಭೆ ಇದೆ. ಆದ್ದರಿಂದ ಪದೆ ಪದೆ ಹೋಗುವುದು ಸರಿಯಲ್ಲ. ಆದರೆ ಎಂಪಿ ಬರಬೇಡಿ ಎನ್ನುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.

ನಾಗಮಂಗಲದಲ್ಲಿ ಬಾಂಗ್ಲಾದೇಶದವರು ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಸಂಬಂಧ ಜಿಲ್ಲಾ ಎಸ್ಪಿ ಅವರಿಗೆ ಹೇಳಿದ್ದೇನೆ. ಮಾತ್ರವಲ್ಲದೆ ಆ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಸುರೇಶ್‌ಗೌಡ ಅವರಿಗೆ ನೋಟಿಸ್ ಕೊಟ್ಟು, ವಿವರಣೆ ಕೇಳಲು ಹೇಳಿದ್ದೇನೆ. ಬಾಂಗ್ಲಾದೇಶದಿಂದ ಬಂದಿದ್ದಾರೆ ಎಂದರೆ ಅದು ಕೇಂದ್ರ ಸರ್ಕಾರದ ವೈಫಲ್ಯ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಂತ್ರಿ ಕುಮಾರಸ್ವಾಮಿ ಉತ್ತರ ಕೊಡಬೇಕಾಗುತ್ತದೆ ಎಂದರು.

ಸಿಎಂ ಅಸಹಾಯಕತೆ, ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುರೇಶ್‌ಗೌಡ ಹೇಳಿದ ಮೇಲೆ ನಾನು ರಾಜೀನಾಮೆ ಕೊಡಬೇಕಲ್ಲವೇ. ನನ್ನ ಶಾಸಕ, ಮಂತ್ರಿ ಮಾಡಿದ್ದು ಅವರೇ ಎಂದು ವ್ಯಂಗ್ಯವಾಡಿದ ಸಚಿವ ಚಲುವರಾಯಸ್ವಾಮಿ, ಸಿಎಂ ವಿರುದ್ದ ಹಿಟ್ಲರ್ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೇಂದ್ರ ಸಚಿವೆ ತೂಕವಾಗಿ ಮಾತನಾಡಬೇಕು. ಅವರಿಗೆ ನಾವು ಉತ್ತರ ಕೊಡಬಹುದು, ಕೊಟ್ಟರೆ ನಮ್ಮ ವ್ಯಕ್ತಿತ್ವ ಹಾಳಾಗುತ್ತದೆ. ಶೋಭಾ, ಆರ್.ಅಶೋಕ್‌ಗೆ ಬೇಕಿರುವುದು ಸಾರ್ವಜನಿಕರ ಹಿತ, ಶಾಂತಿ ಅಲ್ಲ. ಆದ್ದರಿಂದ ಅವರ ಬಗ್ಗೆ ಮಾತಾನಾಡುವುದಕ್ಕೆ ಹೋಗಬಾರದು. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿಯ ಕಾರ್ಯಕರ್ತರು ಸಮಾಧಾನವಾಗಿದ್ದಾರೆ. ಯಾವುದೇ ತರಹ ಘಟನೆ ನಡೆಯಬೇಕು ಎಂದು ಆಸೆ ಪಡಲ್ಲ. ಆದರೆ ಒಂದಷ್ಟು ಜೆಡಿಎಸ್‌ನವರುವ ಪ್ರಚೋಧನೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಜನ ಇದನ್ನು ಸಹಿಸಲ್ಲ. ಯಾರು ಮಾಡಿದರೂ ತಪ್ಪು ಎಂದು ಹೇಳಿದರು.

ಹಿಂದು ಮತ್ತು ಮುಸ್ಲಿಂ ಜನರು ಸಮಾಧಾನದಿಂದ ಇದ್ದಾರೆ. ಆದರೆ ಒಂದು ಪಕ್ಷದ ಕಾರ್ಯಕರ್ತರು ಮಾತ್ರ ಫೈಟ್ ಮಾಡುತ್ತಿದ್ದಾರೆ. ರಾಜಕಾರಣಕ್ಕಾಗಿ ಈ ರೀತಿ ಕೆದಕುತಿದ್ದಾರೆ. ಎಲ್ಲರು ಶಾಂತಿಯಾಗಿ ಇದ್ದಾರೆ. ಆ ರೀತಿಯ ಪರಿಸ್ಥಿತಿ ಇಲ್ಲ, ಎಲ್ಲರೂ ಒಟ್ಟಿಗೆ ಇದ್ದಾರೆ. ಆದರೆ ಜೆಡಿಎಸ್ ಅವರಿಗೆ ಇದು ಸಮಾಧಾನ ಇಲ್ಲ ಎಂದ ಅವರು, ಶಾಸಕ ಮುನಿರತ್ನಗೆ ಸಂಬಂಧಿಸಿದಂತೆ ಒಂದಷ್ಟು ಆಡಿಯೋ ಬಿಡುಗಡೆ ಆಗಿದೆ. ಜೂಡಿಷಿಯಲ್ ಕಸ್ಟಡಿಯಲ್ಲಿದ್ದಾರೆ. ತನಿಖೆ ಆಗಲಿದೆ. ಇಲ್ಲಿಗೆ ಆರ್.ಅಶೋಕ್, ಅಶ್ವಥ್‌ನಾರಾಯಣ, ಸಿ.ಟಿ.ರವಿ ಬರುತ್ತಾರೆ. ದಲಿತರು ಹಾಗೂ ಒಕ್ಕಲಿಗರ ಬಗ್ಗೆ ಮುನಿರತ್ನ ಮಾತನಾಡಿರುವುದನ್ನು ಕನಿಷ್ಟ ಖಂಡಿಸಲಿಲ್ಲ. ಇನ್ನು ಕುಮಾರಸ್ವಾಮಿ ಕೂಡ ಮಾತನಾಡದಿರುವುದು ದುರಂತ. ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಕೊಲೆ ಆರೋಪಿಗೆ ಶ್ರೀರಂಗಪಟ್ಟಣ ಕಸಾಪ ಅಧ್ಯಕ್ಷ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಗೃಹಸಚಿವ ಅಮಿತ್ ಷಾ , ಪ್ರಧಾನಮಂತ್ರಿ ಮೋದಿ, ನನ್ನ ಮೇಲೂ ಕೇಸ್ ಇದೆ. ಏನು ಮಾಡಬೇಕು?. ಇದು ರಾಜಕೀಯವಾಗಿ ಪ್ರಚೋದನೆ ಮಾಡುತ್ತಿರುವ ವಿಚಾರವಾಗಿದೆ. ಪ್ರಕರಣ ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದ ಅವರು, ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೇಳಿದ್ದೇನೆ. ಇದುವರೆಗೂ ಯಾವುದೇ ದೂರು ಬಂದಿರಲಿಲ್ಲ. ಆದರೆ ಸಾರ್ವಜನಿಕರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಅದರ ಬಗ್ಗೆ ನಿರ್ಲಕ್ಷೃ ಮಾಡದೇ ಕ್ರಮವಾಗಲಿದೆ. ಈ ಸಂಬಂಧ ಎಸ್ಪಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net