

ಮಂಡ್ಯ: ದಿಶಾ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ಮಾಡುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಇದೆ. ಆದರೆ ಎಲ್ಲ ಅಧಿಕಾರಿಗಳನ್ನು ಕೂರಿಸಿಕೊಂಡು ಜನತಾದರ್ಶನ ಮಾಡಲಿಕ್ಕೆ ಅಧಿಕಾರ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾದರ್ಶನಕ್ಕೆ ಅಧಿಕಾರಿಗಳ ಹೋಗದಂತೆ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಜನತಾದರ್ಶನ ಮಾಡುವುದಕ್ಕೆ ಅಧಿಕಾರ ಇಲ್ಲ. ಜನರ ಅಹವಾಲು ಸ್ವೀಕರಿಸಿ ಜಿಲ್ಲಾಧಿಕಾರಿಗೆ ತಲುಪಿಸಬಹುದು ಅಷ್ಟೇ. ಒಂದು ವೇಳೆ ಅನಧಿಕೃತವಾಗಿ ಡಿ.ಕೆ.ಸುರೇಶ್ ಈ ಕಾರ್ಯಕ್ರಮ ಮಾಡಿದ್ದರೂ ತಪ್ಪೇ ಎಂದರು.
ಕುಮಾರಸ್ವಾಮಿ ಒಬ್ಬರದೆ ದೊಡ್ಡತನ, ಮಿಕ್ಕವರೆಲ್ಲ ಸಣ್ಣವರು. ಅವರು ಮೊದಲ ಬಾರಿ ಸಂಸದರಾಗಿಲ್ಲ. ತುಂಬಾ ಅನುಭವ ಇದೆ ಎಂದು ಭಾವಿಸಿದ್ದೇನೆ. ಯಾರಿಗೂ ಇಲ್ಲದ ನಿರ್ಬಂಧ ಇವರಿಗೆ ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರ‌್ಯಾರಿಗೆ ಏನೇನೂ ವ್ಯಾಪ್ತಿ ಅವರಿಗೂ ಗೊತ್ತಿದೆ. ಎಚ್‌ಡಿಕೆ ಎರಡು ಬಾರಿ ಸಿಎಂ ಆಗಿದ್ದಾಗ ಇದ್ದ ಆದೇಶ ಈಗಲೂ ಇದೆ ಅಷ್ಟೇ. ಚಿತ್ರದುರ್ಗ ಎಂಪಿ ನಾರಾಯಣಸ್ವಾಮಿ ಹೀಗೆ ಮಾಡಲು ಹೊರಟಾಗ ಮಾಡಿದ್ದ ಸುತ್ತೋಲೆ ಈಗಲೂ ಹೊರಡಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.