ಆರು ತಿಂಗಳು, ವರ್ಷಕ್ಕೆ ಮಂಡ್ಯಕ್ಕೆ ಬರುವ ಎಚ್‌ಡಿಕೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕೆ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಆರು ತಿಂಗಳು, ವರ್ಷಕ್ಕೆ ಬರುವ ಸಂಸದ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಬೇಕೆಂದು ನನಗೆ ಅನ್ನಿಸಲ್ಲ. ಏನೋ ತೊಂದರೆ ಆಗಿದೆ ಎಂಬುದನ್ನು ತೋರಿಸಿಕೊಳ್ಳುತ್ತಾರೆ. ಸಂಸದರ ಅನುದಾನ ಎಲ್ಲರಿಗೂ ಬಂದಿದೆ. ಅದನ್ನೇ ಸಾಧನೆ ಎನ್ನುವ ರೀತಿ ಬಿಂಬಿಸಿಕೊಳ್ಳುವುದು ದೊಡ್ಡಸ್ತಿಕೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಕೈಗಾರಿಕೆ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ ತೋರಿಸುತ್ತಿದೆ ಎನ್ನುವ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ನಗರದಲ್ಲಿ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ವಿಶೇಷ ಅನುದಾನ ತಂದಿದ್ದರೆ ಅದು ಸಾಧನೆ ಆಗುತ್ತದೆ. ಫ್ಯಾಕ್ಟರಿ ಅಥವಾ ಉದ್ಯೋಗ ಸೃಷ್ಟಿಸಿದ ಬಗ್ಗೆ ಎಚ್‌ಡಿಕೆ ಪಟ್ಟಿ ಬಿಡುಗಡೆ ಮಾಡಲಿ. ಸಿಎಸ್‌ಆರ್ ಅನುದಾನ ತಂದಿದ್ದನ್ನ ಕುಮಾರಸ್ವಾಮಿ ಅವರು ಲೆವೆಲ್ ರೀತಿ ಹೇಳಿಕೊಳ್ಳಬಾರದು. ಪ್ರಗತಿಯಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು ಎಚ್‌ಡಿಕೆಗೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಪ್ರಧಾನ ಮಂತ್ರಿ ಬಳಿ ಕುಳಿತು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಬೇಕು. ಇನ್ನು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರನ್ನು ಎಚ್‌ಡಿಕೆ ಭೇಟಿಯೇ ಆಗಿಲ್ಲ. ರಾಜ್ಯದ ಕೈಗಾರಿಕಾ ಸಚಿವರನ್ನು ಭೇಟಿಯಾಗಿದ್ದಾರಾ?. ಈವರೆಗೆ ರಾಜ್ಯದಿಂದ ಹಲವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಎರಡು ಮೂರು ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಮ್ಮ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆಯಾದಾಗ ಎಚ್‌ಡಿಕೆಗೆ ಪತ್ರ ಬರೆದಿದ್ದೆ. ಆದರೆ ಅವರು ಕೊಡಿಸಲಿಲ್ಲ. ಕುಮಾರಸ್ವಾಮಿ ಜನರನ್ನ ಮರಳು ಮಾಡುವುದರಲ್ಲಿ ನಿಸ್ಸೀಮರು. ಕೇಂದ್ರ ಮಂತ್ರಿಯಾಗಿ ಕುಮಾರಸ್ವಾಮಿ ಕೊಡುಗೆ ಏನು?. ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳುವುದನ್ನ ಎಚ್‌ಡಿಕೆ ಬಿಡಲಿ. ಒಂದೇ ಒಂದು ರೂಪಾಯಿ ಉಪಯೋಗ ಕುಮಾರಸ್ವಾಮಿಯಿಂದ ರಾಜ್ಯಕ್ಕೆ ಆಗಿಲ್ಲ ಎಂದು ಆರೋಪಿಸಿದರು.

ಸರ್ಕಾರ ಗುತ್ತಿಗೆದಾರರ ಬಾಕಿ ಹಣ ಉಳಿಸಿಕೊಂಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಗುತ್ತಿಗೆದಾರರ ಬಾಕಿ ಪಾವತಿಸಿ ಅಭಿವೃದ್ಧಿ ನಿಲ್ಲಿಸಬೇಕಾ?. ದುಡ್ಡಿಲ್ಲದಿದ್ದರೂ ಟೆಂಡರ್ ಕರೆದು ಕೆಲಸ ಮಾಡಿದ್ದಾರೆ. ಬಾಕಿ ಕ್ಲಿಯರ್ ಮಾಡಲ್ಲ ಎಂದು ಹೇಳಲ್ಲ, ಮಾಡುತ್ತೇವೆ. ಸಚಿವ ಸಂಪುಟ ಪುನರ್‌ರಚನೆಯ ವಿಷಯ ಹೈಕಮಾಂಡ್ ತೀರ್ಮಾನ ಆಗಿದೆ. ನವೆಂಬರ್‌ನಲ್ಲಿ ಕ್ರಾಂತಿನೂ ಆಗಲ್ಲ. ಬ್ರಾಂತಿನೂ ಆಗಲ್ಲ. ಆರ್‌ಎಸ್‌ಎಸ್ ಬಿಜೆಪಿ ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ ಕುರಿತು ಸರ್ಕಾರದ ತೀರ್ಮಾನವೇ ಅಂತಿಮ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net