ಗಾಂಧೀಜಿ ಬಿಟ್ಟರೆ ಎಚ್‌ಡಿಕೆಯಷ್ಟೇ ಸತ್ಯ ಹೇಳೋದು: ಮಾಜಿ ಸಿಎಂ ವಿರುದ್ಧ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

N Cheluvarayaswamy
ಸಾಂದರ್ಭಿಕ ಚಿತ್ರ
Published on

ಮಂಡ್ಯ: ದೇಶದಲ್ಲಿ ಮಹಾತ್ಮಗಾಂಧೀಜಿ ಅವರನ್ನು ಬಿಟ್ಟರೆ ಸತ್ಯ ಹೇಳುವುದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ್ದು ಎರಡು ತಲೆ ರಾಜಕೀಯ ಎಂಬ ಎಚ್‌ಡಿಕೆ ಟ್ವೀಟ್ ವಿಚಾರಕ್ಕೆ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಲೆ ಮತ್ತು ಹೃದಯಕ್ಕೆ ಕನೆಕ್ಷನ್ ಇಲ್ಲದಂತೆ ಮಾತಾಡುತ್ತಾರೆ. ಈ ಹಿಂದೆ ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಮಾತನಾಡಿದನ್ನು ನೋಡಿದ್ದೇವೆ. ಈಗ ಏನು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಎಚ್‌ಡಿಕೆ ಹುಟ್ಟುತ್ತಲೇ ಎಲ್ಲ ಪರಿಣಿತಿ ಹೊಂದಿದ್ದಾರೆ. ಅವರು ಯಾರ ಗೈಡ್‌ನ್ನು ತೆಗೆದುಕೊಳ್ಳಲ್ಲ. ಅವರಿಗೆ ಯಾರು ಬಿಜೆಪಿ ಸಹವಾಸ ಮಾಡಲು ಹೇಳಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಜತೆ ಮಾತನಾಡಿದ ತಕ್ಷಣ ಪಕ್ಷ ಸೇರುತ್ತಾರೆ ಅಂತಲ್ಲ. ನಾನು ಮೊದಲೆ ಹೇಳಿದ್ದೆ, ಜಿಲ್ಲೆಯಲ್ಲಿ ಒಂದಷ್ಟು ಜನ ಕಾಂಗ್ರೆಸ್‌ಗೆ ಬರುತ್ತಾರೆ ಅಂತಾ. ಇನ್ನೂ 10 ದಿನಗಳ ಒಳಗೆ ಇದರ ಬಗ್ಗೆ ಚಿತ್ರಣ ಗೊತ್ತಾಗುತ್ತದೆ. ಪಕ್ಷಕ್ಕೆ ಬರುವವರು ಕಂಡಿಷನ್ ಹಾಕಿಲ್ಲ, ಅದರಂತೆ ನಾವು ಕೂಡ ಹೇಳಿಲ್ಲ. ನಾರಾಯಣಗೌಡ ಅವರು ಬರುತ್ತಾರೆ ಅನ್ನೋದನ್ನು ಹೇಳಲ್ಲ. ಬೇರೆ ಅವರು ಬರಲ್ಲವೆಂದೂ ಹೇಳಲ್ಲ. ಆದರೆ ಜೆಡಿಎಸ್‌ನಿಂದಲೂ ಕಾಂಗ್ರೆಸ್‌ಗೆ ಬರುತ್ತಾರೆ. ಜೆಡಿಎಸ್ ವಾತಾವರಣ ಸರಿ ಇಲ್ಲವೆಂದು ನಾರಾಯಣಗೌಡ ಬಿಜೆಪಿಗೆ ಹೋದರು. ಈಗ ಬಿಜೆಪಿ-ಜೆಡಿಎಸ್ ಒಂದಾದ ಮೇಲೆ ಅವರು ಹೇಗೆ ಇರುತ್ತಾರೆ. ಬಿಜೆಪಿ ಅವರಿಗೆ ಮಂಡ್ಯದಲ್ಲಿ ಪ್ರಾಮುಖ್ಯತೆ ಸಿಗಲ್ಲ. ಇಲ್ಲಿ ಬಿಜೆಪಿಗಿಂತ ಜೆಡಿಎಸ್‌ಗೆ ಪ್ರಾಮುಖ್ಯತೆ. ಅದಕ್ಕೆ ಬಿಜೆಪಿಯಿಂದ ಅವರಿಗೆ ಅಸಮಾಧಾನವಾಗುತ್ತಿದೆ. ನಾವು ಆಪರೇಷನ್ ಹಸ್ತ ಮಾಡಿಲ್ಲ. ಎಲ್ಲರೂ ಅವರ ಪಕ್ಷದಲ್ಲಿ ಅಸಮಾಧಾನ ಪಟ್ಟು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅದರಂತೆ ನಾರಾಯಣಗೌಡ ಅವರಿಗೆ ಕಾಂಗ್ರೆಸ್ ಬರಲು ಆಸಕ್ತಿ ಇದೆ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ಮಾಡಿದರ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪತ್ರ ವ್ಯವಹಾರ ಮಾಡಿದೆ. ಕೇಂದ್ರದಿಂದ ನಮಗೆ ಸ್ಪಂದನೆ ಸಿಗದಿದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ. ಹಣಕಾಸಿನ ಅಂಕಿ ಅಂಶಗಳ ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾವು 15 ಸಾವಿರ ಕೋಟಿ ರೂ ಕೇಳಿದ್ದೀವಿ, ಅವರು ಎಷ್ಟಾದರೂ ಕೊಡಲಿ. ನಾವು ಇಷ್ಟೆ ಕೊಡಿ ಎಂದೂ ಒತ್ತಡ ಹಾಕಲ್ಲ. ಬಿಜೆಪಿ ಸಂಸದರಿಗೆ ನಾವು ಯಾವ ಭಾಷೆಯಲ್ಲಿ ಹೇಳಬೇಕು. ಐದು ತಿಂಗಳು ಕಳೆದರೂ ಬರ ಪರಿಹಾರ ಕೊಟ್ಟಿಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಇವರ‌್ಯಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು. ನಮ್ಮ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕಮಿಟ್‌ಮೆಂಟ್ ಇರಬೇಕು. ಹೋರಾಟಕ್ಕೆ ಸ್ವಾಭಿಮಾನಿ ಸಂಸದರು ಬರಲಿಲ್ಲ. ಡಿ.ಕೆ.ಸುರೇಶ್ ಬಿಟ್ಟರೆ ಯಾರೂ ಬರಲಿಲ್ಲ ಎಂದು ಟೀಕಿಸಿದರು.

ಫೆ.9ರ ಮಂಡ್ಯ ನಗರ ಬಂದ್‌ಗೆ ಕರೆ ಕೊಟ್ಟವರು ಕಾನೂನು ಹಾಗೂ ಸಂವಿಧಾನದ ವಿರುದ್ದ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಬಿಡಿ. ಬಿಜೆಪಿಯವರು ಜೆಡಿಎಸ್ ಜತೆ ಸೇರಿ ಶಕ್ತಿ ಬಂದಿರಬಹುದು. ಇದರ ಹಿಂದೆ ಬಿಜೆಪಿ, ಜೆಡಿಎಸ್ ನೇತೃತ್ವ ವಹಿಸಿದೆಯೋ ನನಗೆ ಗೊತ್ತಿಲ್ಲ. ಕೆರಗೋಡಿನಲ್ಲಿ ಹಾರಿಸುರುವ ರಾಷ್ಟ್ರಧ್ವಜ ಇಳಿಸಬೇಕಾ, ಬೇಡವೇ ಎಂದು ಸ್ಪಷ್ಟಪಡಿಸಲಿ. ಲಿಖಿತ ರೂಪದಲ್ಲಿ ತಿಳಿಸಿದ ಬಳಿಕ ನಾನು ಮಾತನಾಡುತ್ತೇನೆ. ಅವರು ಚರ್ಚೆಗೆ ಬಂದರೆ ನಾನು ಮಾತನಾಡುತ್ತೇನೆ. ಈಗಾಗಲೇ ಜಿಲ್ಲಾಧಿಕಾರಿ ಸಭೆ ಮಾಡಿ ಮಾತಾಡಿದ್ದಾರೆ. ಅವರು ನಿಖರವಾಗಿ ತಮ್ಮ ಪ್ರಸ್ತಾವನೆ ಇಟ್ಟಿಲ್ಲ. ಪಂಚಾಯಿತಿ ಜಾಗದಲ್ಲಿ ಎಲ್ಲಿಯೂ ರಾಷ್ಟ್ರ ಹಾಗೂ ಕನ್ನಡ ಧ್ವಜ ಹಾರಿಸಲು ಅವಕಾಶ ಇಲ್ಲ. ಅದನ್ನ ಜಿಲ್ಲಾಡಳಿತ ಮಾಡಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net