

ಬಾದಾಮಿ: ಪತ್ರಿಕಾ ದಿನಾಚರಣೆ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎರಡು ದಿನ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ ವಿಜಯ ಸಾಧಿಸಿ ಚಾಲುಕ್ಯ ಕಪ್-2023 ಮುಡಿಗೇರಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ಪೊಲೀಸ್ ಇಲಾಖೆಯು ವಕೀಲರ ಸಂಘವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಕೀಲರ ಸಂಘ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಿತ್ಯವೂ ಸಾರ್ವಜನಿಕ ಸೇವೆಯಲ್ಲಿರುವವರನ್ನು ಒಂದೆಡೆ ಸೇರಿಸಿ ತಂಡಗಳನ್ನಾಗಿ ಮಾಡಿ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡಿರುವ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಬಾದಾಮಿ ತಾಲೂಕು ಕ್ರೀಡಾಂಗಣ ಮಂಜೂರು ಹಾಗೂ ನಿರ್ಮಾಣ ಕಾರ್ಯವನ್ನು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾನಿಪ ಸಂಘದ ತಾಲೂಕು ಅಧ್ಯಕ್ಷ ಅಡಿವೇಂದ್ರ ಇನಾಮದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಗಳ ಹಾಗೂ ಸಂಘಗಳ ಸದಸ್ಯರ ಮಧ್ಯೆ ಸೌಹಾರ್ದ ಏರ್ಪಡಿಸುವ ಪಂದ್ಯಾವಳಿ ಇದಾಗಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 8 ತಂಡಗಳ ಆಟಗಾರರು ಉತ್ತಮ ಕ್ರೀಡಾಸ್ಫೂರ್ತಿ ತೋರಿದರು ಎಂದರು.
ಕಮತಗಿ ಪಪಂ ಸದಸ್ಯ ರಮೇಶ ಜಮಖಂಡಿ, ನ್ಯಾಯವಾದಿಗಳಾದ ಎಸ್.ಎಸ್. ಮಿಟ್ಟಲಕೋಡ, ಜಮಖಂಡಿಯ ಕಾಡಗಿ, ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಸಿಪಿಐ ಡಿ.ಡಿ. ಧೂಳಖೇಡ, ಪಿಎಸ್‌ಐ ನಿಂಗಪ್ಪ ಪೂಜಾರಿ, ಅಪರಾಧ ವಿಭಾಗದ ಪಿಎಸ್‌ಐ ವಿಠ್ಠಲ, ಪತ್ರಕರ್ತರಾದ ಎಸ್.ಎಂ. ಹಿರೇಮಠ, ಲಿಂಗರಾಜ ಚಿನಿವಾಲರ, ಉಮೇಶ ಭಿಕ್ಷಾವತಿಮಠ, ಶಂಕರ ಕುದರಿಮನಿ, ಬಸವರಾಜ ಉಳ್ಳಾಗಡ್ಡಿ, ಫಿರೋಜ ಬಾಗವಾನ, ಮಂಜುನಾಥ ಪಾರ್ವತಿಮಠ, ಮಹಾಂತೇಶ ಅಂಬಿಗೇರ, ಸಂಜಯ ಜಗದಾಳೆ, ಸಂಗಮೇಶ ಜವಳಿ, ಶಿವು ರೋಣದ, ಕಿರಣ ಜವಳಿ ಇತರರಿದ್ದರು.
ಪ್ರಶಸ್ತಿ ವಿತರಣೆ:
ಪೊಲೀಸ್ ಇಲಾಖೆಯ ವಿಜಯ ಅವರು ಫೈನಲ್ ಪಂದ್ಯ ಪುರುಷ ಮತ್ತು ಸರಣಿ ಸರ್ವೋತ್ತಮ, ಉತ್ತಮ ಬಾಟ್ಸ್‌ಮನ್ ಆಗಿ ಕಂದಾಯ ಇಲಾಖೆಯ ಧನಂಜಯ, ಉತ್ತಮ ಬೌಲರ್ ಆಗಿ ವಕೀಲರ ಸಂಘದ ಕಿರಣ ವೈಯಕ್ತಿಕ ಪ್ರಶಸ್ತಿ ಪಡೆದರು. ಆರೋಗ್ಯ, ಶಿಕ್ಷಣ, ಹೋಟೆಲ್, ಭೂಮಾಪನಾ ಇಲಾಖೆ ತಂಡಗಳೂ ಭಾಗವಹಿಸಿ ಉತ್ತಮ ಆಟ ಪ್ರದರ್ಶಿಸಿದ್ದಕ್ಕೆ ಪ್ರಶಸ್ತಿ ನೀಡಲಾಯಿತು.