

ಮಂಡ್ಯ: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳಾಗಿರುವ ಹಿನ್ನಲೆಯಲ್ಲಿ ಫೆ.17ರಂದು ಶ್ರೀರಂಗಪಟ್ಟಣದಲ್ಲಿ ಬೆಳ್ಳಿಪರ್ವ ಡಿ-25 ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ತಿಳಿಸಿದರು.
ಅಂದು ಸಂಜೆ 5 ಗಂಟೆಗೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಗಳು, ಬೇಬಿಮಠದ ಶ್ರೀಗಳು,ಪ್ರಕಾಶನಾಥ ಸ್ವಾಮೀಜಿ, ವಿನಯ್ ಗುರೂಜಿ ಸೇರಿದಂತೆ ಹಲವು ಮಠಾಧೀಶರು ಆಗಮಿಸಿ ನಟ ದರ್ಶನ್ ಅವರನ್ನು ಆಶೀರ್ವದಿಸಲಿದ್ದಾರೆ. ಸಂಸದೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ದರ್ಶನ್ ಅವರನ್ನು ಸನ್ಮಾನಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಂದ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮ ಇರಲಿವೆ. ವಿನೋದ್‌ರಾಜ್‌ಕುಮಾರ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ, ಅಭಿಷೇಕ್ ಅಂಬರೀಷ್, ಧನ್ವೀರ್, ಚಿಕ್ಕಣ್ಣ, ಜೈದ್‌ಖಾನ್, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಚಿತ್ರರಂಗದ ಸಾಕಷ್ಟು ನಟ, ನಟಿಯರು ಭಾಗವಹಿಸಲಿದ್ದಾರೆ. ಹಾಡು, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಜನರಿಗೆ ಮುಕ್ತ ಪ್ರವೇಶವಿದ್ದು, ಸುಮಾರು 25 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ನಗರದ ಸರ್‌ಎವಿ ಕ್ರೀಡಾಂಗಣದಲ್ಲಿ ಆಯೋಜಿಸಬೇಕಿತ್ತು. ಆದರೆ ಕ್ರೀಡಾಂಗಣದ ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ ಹಾಗೂ ಸ್ಥಳಾವಕಾಶ ದೊಡ್ಡದಿರುವ ಕಾರಣಕ್ಕೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸನ್ನಿಧಿಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಜಿಲ್ಲೆಯ ಜನರು ಬಂದು ನಟ ದರ್ಶನ್ ಅವರಿಗೆ ಶುಭ ಕೋರಬೇಕೆಂದು ಮನವಿ ಮಾಡಿದರು.
ಭೂತನ ಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರು, ಬೇಲೂರು ಗ್ರಾಪಂ ಮಾಜಿ ಅಧ್ಯಕ್ಷ ಸಂಜಯ್, ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಯುವ ಮುಖಂಡ ಸಂತೋಷ್‌ಕುಮಾರ್ ಇದ್ದರು.