ನೂತನ ಡಿಸಿಗೆ ಜ್ವಲಂತ ಸವಾಲುಗಳು

DC AB basavaraju
Published on

ಬೆಂಗಳೂರು ಗ್ರಾಮಾಂತರ

ನಾಲ್ಕು ತಾಲೂಕುಗಳನ್ನೊಳಗೊಂಡಿರುವ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆ ನಗರೀಕರಣ, ಕೈಗಾರೀಕರಣದತ್ತ ವೇಗವಾಗಿ ಮುನ್ನುಗ್ಗುತ್ತಿದೆ. 105 ಪಂಚಾಯಿತಿ, 3 ನಗರಸಭೆ, 2 ಪುರಸಭೆ 1 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಾಂತರ ಜಿಲ್ಲೆಗೆ ಇದುವರೆಗೆ ಜಿಲ್ಲಾ ಕೇಂದ್ರವಿಲ್ಲದಿರುವುದು ಕಪ್ಪುಚಿಕ್ಕೆಯಾಗಿಯೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡ, ಪಿ.ಎನ್.ರವೀಂದ್ರ, ಶ್ರೀನಿವಾಸ್, ಲತಾ ನಂತರದಲ್ಲಿ ಬಂದ ಡಾ.ಎನ್.ಶಿವಶಂಕರ್ ಸಾಕಷ್ಟು ಕೆಲಸ ಮಾಡಿದ್ದರು. ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಯಾವುದೇ ವಿವಾದಗಳಿಲ್ಲದೆ ಅಚ್ಚುಕಟ್ಟುತನ, ಸರಳತೆಯಿಂದ ಜನಮನ್ನಣೆಗಳಿಸಿದ್ದರು. ಇದರ ಸಾಲಿಗೆ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಒಂದು ಕಿರುನೋಟ.

ಬೂದಿಮುಚ್ಚಿದಂತಿರುವ ಭೂಸ್ವಾಧೀನ ವಿರೋಧಿ ಹೋರಾಟ:

ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಬೂದಿಮುಚ್ಚಿದ ಕೆಂಡದಂತಿಗೆ ಸಾವಿರ ದಿನ ದಾಟಿದ ಹೋರಾಟಕ್ಕೆ ಇದುವರೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಹಾಗೂ ಲತಾ ಅವರ ಅವಧಿಯಲ್ಲಿ ಹೋರಾಟ ತೀವ್ರಗೊಂಡಿತ್ತು ನಂತರದಲ್ಲಿ ಡಾ.ಎನ್.ಶಿವಶಂಕರ್ ಅಧಿಕಾರವಧಿಯಲ್ಲಿ ಹೋರಾಟ ತಾರಕಕ್ಕೇರಿತು. ಪ್ರತಿ ಬಾರಿ ರಾಜೀಸಂಧಾನದ ಪ್ರಹಸನದ ಮೂಲಕ ಹೋರಾಟವನ್ನು ತಿಳಿಗೊಳಿಸುತ್ತಾ ಬರಲಾಗಿದೆ. ಸಾಕಷ್ಟು ಮನವಿ, ಪ್ರತಿಭಟನೆ, ಧರಣಿ ಹೋರಾಟಗಳಿಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ. ನೂತನ ಡಿಸಿ ಬಸವರಾಜು ಅವರಿಗೆ ಇದೊಂದು ಪ್ರಮುಖ ಸವಾಲಾಗಿದೆ.

 ಕೆರೆ ರಕ್ಷಣೆ ಕೂಗು: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯನಿಕ ಮಿಶ್ರಿತ ನೀರು ಹಾಗೂ ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಕೆರೆಗಳನ್ನು ಸೇರುತ್ತಿರುವುದನ್ನು ವಿರೋಧಿಸಿ ದೊಡ್ಡಮಟ್ಟದ ಹೋರಾಟ ನಡೆಯುತ್ತಿದೆ. ಕಳೆದ ಗಣರಾಜ್ಯೋತ್ಸವದಂದು ಕಪ್ಪುಬಾವುಟ ಹಾರಿಸುವ ಹಂತಕ್ಕೆ ಹೋಗಿದ್ದ ಹೋರಾಟವನ್ನು ಭರವಸೆಗಳ ಮೂಲಕ ಹಿಂದಿನ ಜಿಲ್ಲಾಧಿಕಾರಿ ತಣ್ಣಗಾಗಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರರೂಪ ಪಡೆಯಲಿದೆ. ಇದನ್ನು ನೂತನ ಜಿಲ್ಲಾಧಿಕಾರಿಯಾಗಿರುವ ಎ.ಬಿ.ಬಸವರಾಜು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕಾದುನೋಡಬೇಕಿದೆ.

 ಮುನ್ನೆಲೆಗೆ ಬಂದ ಕಸ ಘಟಕ: ಹಲವು ಹೋರಾಟಗಳ ಬಳಿಕ ಬಾಗಿಲು ಹಾಕಿಕೊಂಡಿರುವ ದೊಡ್ಡಬಳ್ಳಾಪುರದಲ್ಲಿನ ಟೆರ್ರಾಾರ್ಮಾ ಕಸ ಘಟಕ ಮತ್ತೆ ಪುನಾರಂಭಗೊಳ್ಳುವ ಸುದ್ದಿ ಸದ್ದು ಮಾಡುತ್ತಿದ್ದು, ಈಗಾಗಲೇ ಇದರ ವಿರುದ್ಧ ಹೋರಾಟಕ್ಕೆ ಗ್ರಾಮಸ್ಥರು ಅಣಿಯಾಗುತ್ತಿದ್ದಾರೆ. ಸಾಕಷ್ಟು ವಿವಾದ, ಗಲಾಟೆ, ಧರಣಿ, ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಈ ಕಸ ಘಟಕ ಮತ್ತೆ ಆರಂಭಗೊಂಡರೆ ಈ ವ್ಯಾಪ್ತಿಯಲ್ಲಿ ಏನೆಲ್ಲ ಸಮಸ್ಯೆ ಉದ್ಭವಿಸಬಹುದು, ಯಾವೆಲ್ಲ ಗಲಾಟೆ ಗದ್ದಲಗಳಿಗೆ ಕಾರಣವಾಗಬಹುದು ಇದೆಲ್ಲವನ್ನು ನೂತನ ಡಿಸಿ ಹೇಗೆ ನಿಭಾಯಿಸಬಹುದು ಎಂಬ ಸಾಕಷ್ಟು ಪ್ರಶ್ನೆಗಳು ಸಾರ್ವಜನಿಕರ ಮನದಲ್ಲಿ ಕೂತುಹಲಕ್ಕೆ ಕಾರಣವಾಗಿದೆ.

ಟೌನ್‌ಶ್ಿ ನಿರ್ಮಾಣದ ಬಿಸಿ: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಉದ್ದೇಶಿತ ಟೌನ್‌ಶ್ಿ ನಿರ್ಮಾಣದ ಬಿಸಿ ಈಗಾಗಲೇ ಕಾವು ಪಡೆದುಕೊಂಡಿದೆ. ಸ್ಥಳೀಯ ಶಾಸಕರು ಈ ಬಗ್ಗೆ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಈಗಾಗಲೇ ಈ ಭಾಗದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗರಂ ಆಗಿದ್ದು ಶತಾಯಗತಾಯ ಈ ಭಾಗದಲ್ಲಿ ಟೌನ್‌ಶ್ಿ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಮುಂದಿನ ದಿನಗಳಲ್ಲಿ ಈ ವಿಷಯ ದೊಡ್ಡಮಟ್ಟದಲ್ಲಿ ಕಾವುಪಡೆದುಕೊಳ್ಳುವ ಲಕ್ಷಣ ಕಂಡುಬರುತ್ತಿದ್ದು ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಹೋರಾಟಗಾರರ ನಡುವೆ ಯಾವ ರೀತಿ ಸಮನ್ವಯತೆ ಕಾಪಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

 ಏರ್‌ಪೋರ್ಟ್ ನಿರ್ಮಾಣ ಗೊಂದಲ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಎನ್ನುವಂತೆ ನೆಲಮಂಗಲ ವ್ಯಾಪ್ತಿಯಲ್ಲಿ ನೂತನ ಏರ್‌ಪೋರ್ಟ್ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಈ ಭಾಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ ಇದರಿಂದ ನೂರಾರು ಹಳ್ಳಿಗಳು ಸಾವಿರಾರು ಎಕರೆ ಕೃಷಿ ಪ್ರದೇಶ ನಾಮವಶೇಷಗೊಳ್ಳಲಿವೆ ಎಂಬ ಸುದ್ದಿ ದೊಡ್ಡ ಗದ್ದಲವುಂಟು ಮಾಡಿದೆ. ಸ್ಥಳೀಯ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಸದ್ದಿಲ್ಲದೆ ತನ್ನ ಕಾರ್ಯ ಸಾಧಿಸಿಕೊಳ್ಳಲಿದೆ ಎಂಬ ಅನುಮಾನ ದಟ್ಟವಾಗಿದೆ. ಈ ಗೊಂದಲ ಬೂದಿಮುಚ್ಚಿದ ಕೆಂಡದಂತಿದ್ದು ಯಾವಾಗ ಬೆಂಕಿ ಹೊತ್ತಿಕೊಳ್ಳಲಿದೆ ಎಂಬುದನ್ನು ಅಂದಾಜಿಸುವಂತಿಲ್ಲವಾಗಿದೆ. ಈ ವಿಷಯ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ತಲೆಬೇನೆ ತರಿಸಲಿದೆ.

ಜಿಲ್ಲಾ ಕೇಂದ್ರ ಜಗ್ಗಾಟ: ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ನಡುವೆ ನಡೆಯುತ್ತಿರುವ ಜಿಲ್ಲಾ ಕೇಂದ್ರದ ಹಗ್ಗಜಗ್ಗಾಟದ ಬಗ್ಗೆ ಸರ್ಕಾರ ಮೌನಧೋರಣೆ ಮುಂದುವರೆಸಿದೆ ಆದರೆ ಹೋರಾಟಗಾರರು ಈ ಬಗ್ಗೆ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ ನಿಗಧಿ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಯಾವ ರೀತಿ ವರದಿ ನೀಡಲಿದ್ದಾರೆ ಎಂಬ ಕುತೂಹಲವಿದೆ, ಅಥವಾ ಈ ವಿಷಯವನ್ನು ಜ್ವಲಂತವಾಗಿಯೇ ಉಳಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿದೆ.

ವಸ್ತು ಸಂಗ್ರಹಾಲಯದ ಕನಸು: ದೇವನಹಳ್ಳಿ ಸೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಪುರಾತನ ಶಾಸನಗಳು, ವೀರಗಲ್ಲು ಸೇರಿ ಪುರಾತನ ಇತಿಹಾಸ ಸಾರುವ ವಿಶೇಷ ವಸ್ತುಗಳು ಸಿಗುತ್ತಿದ್ದು ಇವುಗಳನ್ನು ಸಂರಕ್ಷಣೆ ಮಾಡಿ ಜಿಲ್ಲೆಯ ಇತಿಹಾಸ ಸಾರುವ ವಸ್ತು ಸಂಗ್ರಹಾಲಯ ನಿರ್ಮಿಸಿಬೇಕೆನ್ನುವುದು ಜಿಲ್ಲೆಯ ಜನರ ಬಹುದಿನಗಳ ಕನಸಾಗಿದೆ. ಇದಕ್ಕಾಗಿ ದೇವನಹಳ್ಳಿಯ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಅವಕಾಶ ಮಾಡಿಕೊಡಬೇಕೆಂದು ಇತಿಹಾಸ ತಜ್ಞರು ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ ಆದರೆ ಇದುವರೆಗೆ ಈ ಕನಸಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ನೂತನ ಜಿಲ್ಲಾಧಿಕಾರಿಗಳು ಈ ಬಗ್ಗೆ ಮನಸ್ಸು ಮಾಡುವರೇ ಎಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.

 ನೀಲಗಿರಿ ತೆರವು ಬಯಲು ಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳದಲ್ಲಿದೆ ಯಾವುದೇ ನದಿಮೂಲವಿಲ್ಲದ ಜಿಲ್ಲೆಯಲ್ಲಿ ಕೊಳವೆಬಾವಿಗಳೇ ನೀರಿನ ಪ್ರಮುಖ ಮೂಲವಾಗಿದೆ ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಕರೀಗೌಡ ಅವರು ನೀಲಗಿರಿ ತೆರವಿಗೆ ದೊಡ್ಡ ಆಂದೋಲನ ರೂಪಿಸಿದ್ದರು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ತೆರವುಗೊಳಿಸಿ ಅದೇ ಜಾಗದಲ್ಲಿ ತೋಟಗಳು ನಿರ್ಮಾಣವಾಗಿದ್ದವು ನಂತರದಲ್ಲಿ ಬಂದ ಡಿಸಿ ಪಿ.ಎನ್.ರವೀಂದ್ರ ಕಾಲದಲ್ಲಿಯೂ ಮುಂದುವರೆಯಿತಾದರೂ ನಂತರದಲ್ಲಿ ಬಂದ ಜಿಲ್ಲಾಧಿಕಾರಿಗಳು ಅತ್ತ ಕಡೆ ಗಮನ ನೀಡಲಿಲ್ಲ. ನೂತನ ಜಿಲ್ಲಾಧಿಕಾರಿಗಳು ಇಂತಹದ್ದೊಂದು ಆಂದೋಲನಕ್ಕೆ ಮರುಹುಟ್ಟು ನೀಡಲಿದ್ದಾರೆಯೇ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net