ಒಗ್ಗಟ್ಟಿನಿಂದ ಸವಾಲುಗಳಿಗೆ ಉತ್ತರ ಸಾಧ್ಯ

Bdk_Challenges
Published on

ಬದಿಯಡ್ಕ: ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕೃತಿಗೆ ವ್ಯಾಪಕ ಪ್ರಮಾಣದ ಸವಾಲುಗಳು ಇತ್ತೀಚೆಗೆ ನಿತ್ಯ ನಿರಂತರವಾಗಿದ್ದು, ನಮ್ಮ ಮಣ್ಣಿನ ಅಸ್ಮಿತೆ ಕಾಪಿಡುವ ನಿಟ್ಟಿನಲ್ಲಿ ಸಮರೋಪಾದಿಯ ಕಾರ್ಯಚಟುವಟಿಕೆ ಸನ್ನದ್ಧತೆಯಲ್ಲಿರಬೇಕು. ಗುಂಪುಗಳಾಗಿ ವಿಭಜನೆಗೊಂಡಿರುವ ಕನ್ನಡದ ಮನಸುಗಳು ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾದಾಗ ಸವಾಲುಗಳಿಗೆ ಉತ್ತರಿಸಲು ಸಾಧ್ಯ ಎಂದು ಕ.ಸಾ.ಪ.ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಬದಿಯಡ್ಕ ಸಮತಾ ಸಾಹಿತ್ಯ ವೇದಿಕೆ ಸಹಕಾರದೊಂದಿಗೆ ಶನಿವಾರ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಎಂ.ಕೆ.ಜಯಚಂದ್ರ ದತ್ತಿ ಹಾಗೂ ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಸಂವಾದ ನಡೆಯಿತು.

ಎಂ.ಕೆ.ಜಯಚಂದ್ರ ಮಾಸ್ತರ್ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ವಿಷಯದಲ್ಲಿ ಆಯಿಷಾ ಪೆರ್ಲ ಹಾಗೂ ಕಮಲಮ್ಮ ದತ್ತಿ ಉಪನ್ಯಾಸದಲ್ಲಿ ಡಾ.ಸುಭಾಷ್ ಪಟ್ಟಾಜೆ ಅವರು ಕನ್ನಡ ಕಥಾ ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ವಿಷಯದಲ್ಲಿ ಉಪನ್ಯಾಸ ನೀಡಿದರು.

ಈ ಸಂದರ್ಭ ಕನ್ನಡ ಹಕ್ಕು ರಕ್ಷಣೆ ಹೋರಾಟಕ್ಕೆ ಕೊಡುಗೆ ನೀಡುತ್ತಿರುವ ಕನ್ನಡ ರಕ್ಷಣಾ ವೇದಿಕೆ ಅಡೂರು ಸಮಿತಿ ಸದಸ್ಯೆ ನಯನಾ ಗಿರೀಶ್ ಅಡೂರು ಅವರನ್ನು ಗೌರವಿಸಲಾಯಿತು.

ಕಸಾಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಪ್ರಾರ್ಥಸಿ, ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net