ಜಪ್ತಿ ವಾಹನ ರಕ್ಷಣೆಯೇ ಸವಾಲು

Vehicle seize
Published on

ಹರೀಶ್ ಮೋಟುಕಾನ, ಮಂಗಳೂರು

ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ನಿತ್ಯವೂ ಕರ್ಫ್ಯೂ ಉಲ್ಲಂಘಿಸಿ ಸಂಚರಿಸುವ 300ಕ್ಕಿಂತಲೂ ಅಧಿಕ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರಿಗೆ, ಅವುಗಳನ್ನು ಸುರಕ್ಷಿತವಾಗಿ ಪಾರ್ಕ್ ಮಾಡುವುದೇ ತಲೆನೋವಾಗಿದೆ. ಠಾಣೆಗೆ ತಂದು ಪಾರ್ಕಿಂಗ್ ಮಾಡಲು ಜಾಗದ ಕೊರತೆ ಎದುರಾಗಿದೆ.

ಕರ್ಫ್ಯೂ ಜಾರಿಯಾದ 10 ದಿನಗಳಲ್ಲಿ ಜಪ್ತಿ ಮಾಡಲಾದ ವಾಹನಗಳ ಸಂಖ್ಯೆ 2000ಕ್ಕಿಂತಲೂ ಅಧಿಕ! ಶುಕ್ರವಾರ 452 ವಾಹನ ವಶಕ್ಕೆ ಪಡೆಯಲಾಗಿದೆ. ಚೆಕ್‌ಪೋಸ್ಟ್‌ಗಳಿಂದ ಟೆಂಪೋದಲ್ಲಿ ಆಯಾ ವ್ಯಾಪ್ತಿಯ ಸಂಚಾರಿ ಪೊಲೀಸ್ ಠಾಣೆಗಳಿಗೆ ವಾಹನ ತಂದಿಡಲಾಗಿದೆ. ನಗರದ ಪೊಲೀಸ್ ಠಾಣೆಗಳಲ್ಲಿ ಇದೀಗ ಸ್ಥಳಾವಕಾಶವೇ ಇಲ್ಲ.

ಕೋರ್ಟ್ ಕೇಸ್: ವಶಕ್ಕೆ ಪಡೆದ ವಾಹನಗಳನ್ನು ಮಾಲೀಕರು ಕೋರ್ಟ್‌ನಲ್ಲಿ ದಂಡ ಕಟ್ಟಿ ಬಿಡಿಸಿಕೊಳ್ಳಬೇಕು. ಒಂದೇ ದಿನದಲ್ಲಿ ಎಲ್ಲವನ್ನೂ ಕೊಂಡೊಯ್ಯಲು ಆಗುವುದಿಲ್ಲ. ಕರ್ಫ್ಯೂ ಕಾರಣಕ್ಕೆ ಕೋರ್ಟ್ ಕಲಾಪಗಳೂ ಸ್ಥಗಿತಗೊಂಡಿವೆ. ಮೂರು ತಿಂಗಳ ತನಕ ವಾಹನಗಳು ಪೊಲೀಸರ ವಶದಲ್ಲೇ ಇರಬೇಕಾಗುತ್ತದೆ. ಹಾನಿ ಉಂಟಾದರೆ ಪೊಲೀಸರೇ ವೆಚ್ಚ ಭರಿಸಬೇಕು. ಇದೀಗ ವಾಹನಗಳ ಸಂರಕ್ಷಣೆ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಿಕೊಡಲಾಗಿದೆ.

ನಿಯಮ ಉಲ್ಲಂಘಿಸಿದ ವಾಹನಗಳನ್ನು ವಶಕ್ಕೆ ಪಡೆದು ಆಯಾ ವ್ಯಾಪ್ತಿಯ ಠಾಣೆಗಳಲ್ಲಿ ತಂದಿಡಲಾಗಿದೆ. ಕೋರ್ಟ್ ಮೂಲಕ ಅವುಗಳನ್ನು ಬಿಡಿಸಿಕೊಳ್ಳಬೇಕು. ಎಲ್ಲರೂ ಮನೆಯಲ್ಲೇ ಇದ್ದು, ಕರೊನಾ ನಿಯಂತ್ರಿಸಲು ಸಹಕಾರ ನೀಡಬೇಕು. ವಿನಾ ಕಾರಣ ಓಡಾಡಬಾರದು. ಎನ್.ಶಶಿಕುಮಾರ್ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net