

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಮಳೆ ಕೈ ಕೊಟ್ಟಿದೆ. ಬರ ಇಣುಕಿದೆ. ಈ ನಡುವೆ ರಾಜ್ಯದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನೆಡಲಾದ ಕೋಟ್ಯಂತರ ಸಸಿಗಳನ್ನು ಉಳಿಸಿಕೊಳ್ಳುವ ಸವಾಲು ಅರಣ್ಯ ಇಲಾಖೆಗೆ ಎದುರಾಗಿದೆ.
ಆಗಸ್ಟ್ ತಿಂಗಳಿಡೀ ಮಳೆ ಸುಳಿವಿಲ್ಲ. ಅರಣ್ಯದ ನೆಡುತೋಪುಗಳಲ್ಲಿ ಒಣಗುತ್ತಿರುವ ಸಸಿಗಳನ್ನು ಕಾಪಾಡುವುದು ಹೇಗೆ ಎಂಬ ಚಿಂತೆ ಇಲಾಖೆಗೆ ತಲೆನೋವಾಗಿದೆ.
ಅರಣ್ಯ, ರಸ್ತೆ ಬದಿ, ಉದ್ಯಾನ, ಸರ್ಕಾರಿ ಜಾಗ ಸೇರಿ ಇತರೆಡೆ ಗಿಡ ನೆಟ್ಟು ಪೋಷಿಸಲು ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಗಳ ನರ್ಸರಿಗಳಲ್ಲಿ ಸಸಿಗಳನ್ನು ಮಳೆಗಾಲ ಪೂರ್ವದಲ್ಲಿ ಬೆಳೆಸಲಾಗಿದೆ.
ಸಸಿ ಬೆಳೆಸಲು, ಸಾಗಿಸಲು, ಗುಂಡಿ ತೋಡಲು, ರಕ್ಷಣೆಗೆ ಹಾಗೂ ಬೇಸಿಗೆಯಲ್ಲಿ ಸಸಿಗಳಿಗೆ ನೀರುಣಿಸಲು ಇಲಾಖೆಗಳು ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡಿತ್ತು.
ಆದರೆ, ಜುಲೈನಿಂದ ಮಳೆ ಕೈ ಕೊಟ್ಟಿದ್ದರಿಂದ ಇಲಾಖೆ ಅಸಹಾಯಕ ಸ್ಥಿತಿಗೆ ಬಂದಿದೆ. ಸಸಿಗಳಿಗೆ ನೀರು ಪೂರೈಸಲು ಅನುಮತಿ ಕೋರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಡಿದ ಮನವಿ ಅರಣ್ಯ ರೋಧನವಾಗುತ್ತಿದೆ.
ಒಂದು ವೇಳೆ ಹಣ ಕೊಟ್ಟರೂ ಕಾಡೊಳಗೆ ಟ್ಯಾಂಕರ್ ಒಯ್ದು ನೀರು ಪೂರೈಸುವುದು ಸವಾಲಿನ ಕೆಲಸ. ಒಂದು ಟ್ಯಾಂಕರ್ ನೀರಿಗೆ 400 ರೂ.,ವಾಹನ ಬಾಡಿಗೆಗೆ 4000 ರೂ. ಎಂದು ಅಂದಾಜಿಸಿದರೂ ಜಿಲ್ಲೆಯೊಂದರಲ್ಲೇ ಲಕ್ಷಾಂತರ ರೂ. ಬೇಕಾಗಲಿದೆ.
ನೀರು ಪೂರೈಸಲು ಅನುಮತಿ ದೊರೆತರೆ ಟೌನ್ ಪ್ಲಾಂಟಿಂಗ್ ಹಾಗೂ ರಸ್ತೆ ಬದಿಯಲ್ಲಿ ನೆಡಲಾದ ಸಸಿಗಳ ರಕ್ಷಣೆ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಅರಣ್ಯಾಭಿವೃದ್ಧಿಯ ಗ್ಯಾರಂಟಿ ನೀಡಿದ್ದ ಸಚಿವ ಈಶ್ವರ ಖಂಡ್ರೆ ಅವರು ಮಳೆಗಾಲದಲ್ಲಿ 5 ಕೋಟಿ ಸಸಿಗಳನ್ನು ನೆಡುವಂತೆ ಇಲಾಖೆ ಗುರಿ ನೀಡಿದ್ದರು. ಸಚಿವರ ಆಶಯಕ್ಕೆ ತಕ್ಕಂತೆ ಜುಲೈ ಅಂತ್ಯದವರೆಗೆ ಸಾಕಷ್ಟು ಪ್ರಮಾಣದಲ್ಲಿ ಪ್ಲಾಟಿಂಗ್ ಕೂಡ ಆಗಿತ್ತು.
ಆದರೆ ನೆಡುತೋಪು ಹಾಗೂ ಸಾರ್ವಜನಿಕ ವಿತರಣೆಗೆಂದು ಬೆಳೆಸಲಾದ ಸಸಿಗಳು ಶೇ.50 ಅಧಿಕ ಪ್ರಮಾಣದಲ್ಲಿ ನರ್ಸರಿಗಳಲ್ಲೇ ಉಳಿದಿವೆ. ಏರಿದ್ದ ದರ ಇಳಿಕೆಯಾಗಿದ್ದರೂ ಸಸಿಗಳನ್ನು ಒಯ್ಯಲು ಜನರು ಆಸಕ್ತಿ ತೋರಿಸುತ್ತಿಲ್ಲ.
ಚಿತ್ರದುರ್ಗ ಜಿಲ್ಲೆಯ 16 ನರ್ಸರಿಗಳಲ್ಲಿ 12.55 ಲಕ್ಕಕ್ಕೂ ಅಧಿಕ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ತೇಗ, ಹೊಂಗೆ, ನೆಲ್ಲಿ, ನುಗ್ಗೆ, ಸಿಹಿ ಹುಣಸೆ, ಹುಣಸೆ, ಆಲ, ಅರಳಿ, ಗುಲ್‌ಮೊಹರ್, ಕಾಡು ಬಾದಾಮಿ, ಸಿಲ್ವರ್ ಓಕ್, ರಕ್ತಚಂದನ, ಶ್ರೀಗಂಧ, ಕರಿ ಬೇವು, ನೇರಳೆ, ಹೊನ್ನೆ, ಬೀಟೆ, ಹಲಸು, ಹೆಬ್ಬೇವು, ಬಿದಿರು ಮೊದಲಾದ 25ಕ್ಕೂ ಅಧಿಕ ತಳಿಗಳ ಸಸಿಗಳು ಇದರಲ್ಲಿ ಸೇರಿವೆ.
ಮೇಲಧಿಕಾರಿಗೆ ಪತ್ರ: ಪ್ರಾದೇಶಿಕ ಅರಣ್ಯ ವಿಭಾಗದಿಂದ ಜಿಲ್ಲೆಯ 335 ಹೆಕ್ಟೇರ್‌ನಲ್ಲಿ ಅಂದಾಜು 1.75ಲಕ್ಷ ಸಸಿಗಳನ್ನು ನೆಡಲಾಗಿದೆ.ಈಗ ಮಳೆ ಕೈ ಕೊಟ್ಟಿದೆ. ಚಳ್ಳಕೆರೆ, ಮೊಳಕಾಲ್ಮೂರಲ್ಲಿ ವಾಟರಿಂಗ್ ಮೂಲಕ ಸಸಿಗಳನ್ನು ಉಳಿಸುವ ಪ್ರಯತ್ನ ನಡೆದಿದೆ. ಪರಿಸ್ಥಿತಿ ವಿವರಿಸಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.- ಟಿ.ರಾಜಣ್ಣ, ಡಿಸಿಎಫ್, ಅರಣ್ಯ ಇಲಾಖೆ, ಚಿತ್ರದುರ್ಗ