

ಮಂಜುನಾಥ ತಿಮ್ಮಯ್ಯ ಮೈಸೂರು
ಲೋಕಸಭಾ ಚುನಾವಣೆ ಬಳಿಕ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಎಲೆಕ್ಷನ್ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಮತ್ತೊಂದು ಸವಾಲಾದರೆ, ಆಡಳಿತರೂಢ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸಲಿದೆ.
ಜಿಪಂ 46, ತಾಪಂ 160 ಸೇರಿದಂತೆ 206 ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಇಷ್ಟು ಸೀಟುಗಳನ್ನು ಮೈತ್ರಿಪಕ್ಷಗಳ ನಡುವೆ ಹಂಚಿಕೆ ಮಾಡಿ, ಬಳಿಕ ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ನೀಡುವುದೇ ತಲೆನೋವಿನ ಕೆಲಸವಾಗಲಿದೆ.
ಜಿಪಂ, ತಾಪಂ ಚುನಾವಣೆಯನ್ನು ನಡೆಸಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಈ ವರ್ಷವೇ ಪಂಚಾಯಿತಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಸ್ಥಳೀಯ ಚುನಾವಣೆ ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿದೆ. ಈ ನಡುವೆಯೂ, ಇದಕ್ಕಾಗಿ ಕೆಲ ಸಿದ್ಧತೆಗಳನ್ನು ಆಯಾಯ ಪಕ್ಷಗಳು ಮಾಡಿಕೊಳ್ಳುತ್ತಿವೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಯಶಸ್ಸಿಯಾಗಿದೆ. ಇದರ ಫಲವಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬಲದಿಂದ ಬಿಜೆಪಿಗೆ ಹೆಚ್ಚಿನ ಸ್ಥಾನಗಳ ಗಳಿಸಿಕೊಳ್ಳಲು ಸಾಧ್ಯವಾಗಿದೆ. ಮೂರು ಸ್ಥಾನಗಳಿಗೆ ಸ್ಪರ್ಧೆ ಮಾಡಿ ಜೆಡಿಎಸ್ ಸಹ 2 ಕಡೆಗೆ ಗೆದ್ದಿದೆ. ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ್ತು ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಬೆಂಬಲ ನೀಡಿರುವುದು ಆಯಾ ಪಕ್ಷಗಳ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ಕಡೆ ಹೋಗದೆ, ಮೈತ್ರಿ ಅಭ್ಯರ್ಥಿ ಪಾಲಾಗಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಪಂಚಾಯಿತಿ ಚುನಾವಣೆಯಲ್ಲೂ ಮೈತ್ರಿಕೂಟ ಸ್ಥಿರತೆ ಕಾಯ್ದುಕೊಳ್ಳಬೇಕಾಗಿದೆ. ಗೊಂದಲ, ಗದ್ದಲಕ್ಕೆ ಅವಕಾಶ ನೀಡದೆ ಸಮನ್ವಯ, ಸಂಘಟನಾತ್ಮಕವಾಗಿ ಒಟ್ಟಿಗೆ ಕೆಲಸ ಮಾಡಿ ಮಿತ್ರಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸವಾಲಿದೆ. ಈ ಹೊಣೆಗಾರಿಕೆಯನ್ನು ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೇಗೆ ನಿರ್ವಹಣೆ ಮಾಡಲಿದ್ದಾರೆ ಎಂಬ ಕೂತುಹಲ ಮೂಡಿದೆ.
ಲೋಕಸಭಾ ಚುನಾವಣೆ ಮತ್ತು ಪಂಚಾಯಿತಿ ಚುನಾವಣೆಗಳು ಸಂಪೂರ್ಣ ವಿಭಿನ್ನ. ಜಿಪಂ, ತಾಪಂನ ಪ್ರತಿ ಕ್ಷೇತ್ರದಲ್ಲೂ ರಾಜಕೀಯ ಚಿತ್ರಣ ವಿಶಿಷ್ಟವಾಗಿರುತ್ತದೆ. ಲೋಕಸಭಾ ಸೀಟುಗಳು ಕಡಿಮೆವಿದ್ದರೆ ಪಂಚಾಯಿತಿಗಳ ಸ್ಥಾನಗಳು ಹೆಚ್ಚಿರುತ್ತವೆ. ಇದು ಸಹಜವಾಗಿ ಗಲಾಟೆ, ಗೊಂದಲಕ್ಕೆ ಕಾರಣವಾಗುತ್ತದೆ. ಜಿಪಂ, ತಾಪಂ ಸ್ಥಾನಗಳು ಉಭಯ ಪಕ್ಷಗಳ ನಡುವೆ ಹಂಚಿಕೆಯಾಗಬೇಕು. ಇದುವೇ ಜಟಿಲ ಎನಿಸಿದೆ.
ಈ ಪ್ರಹಸನ ಮುಗಿದ ಬಳಿಕ ದೊರೆತ ಸೀಟುಗಳಲ್ಲೇ ಆಯಾ ಪಕ್ಷದ ಆಕಾಂಕ್ಷಿಗಳಿಗೆ ನೀಡಬೇಕಾಗಿದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿಯಿಂದ ಪ್ರತಿ ಕ್ಷೇತ್ರ ಹತ್ತಾರು ಆಕಾಂಕ್ಷಿಗಳಿರುತ್ತಾರೆ. ಒಬ್ಬರಿಗೆ ಸೀಟು ಕೊಟ್ಟರೆ, ಇನ್ನೊಬ್ಬರಿಗೆ ಅಸಮಾಧಾನವಾಗುತ್ತದೆ. ಪಕ್ಷದಲ್ಲಿರುವ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿದರೆ ಬಂಡಾಯ ಎದ್ದೇಳುತ್ತಾರೆ. ಇನ್ನೂ ಬಿಜೆಪಿಗೆ ಟಿಕೆಟ್ ಕೊಟ್ಟರೆ ಜೆಡಿಎಸ್ ಆಕಾಂಕ್ಷಿಗಳು, ಜೆಡಿಎಸ್ ಪಕ್ಷಕ್ಕೆ ಟಿಕೆಟ್ ಕೊಟ್ಟರೆ ಬಿಜೆಪಿ ಆಕಾಂಕ್ಷಿಗಳು ಸುಮ್ಮನೆ ಇರಲು ಸಾಧ್ಯವೇ..? ಈ ಅಸಮಾಧಾನ, ಬಂಡಾಯವನ್ನು ಹೇಗೆ ಶಮನ ಮಾಡಲಾಗುತ್ತಿದೆ.
ಈ ರೀತಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕ ಮಾರ್ಗಸೂಚಿ ತಯಾರಿಸಲಾಗುತ್ತದೆಯೇ? ಜಿಲ್ಲಾ ಮಟ್ಟ, ತಾಲೂಕುಮಟ್ಟದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಕಾಡುತ್ತಿದೆ.
‘ಹಿಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಗೆದ್ದಿರುವ ಕ್ಷೇತ್ರ, ಪಕ್ಷದ ಬಲಾಬಲ, ಸಂಘಟನೆ ಆಧಾರದ ಮೇಲೆ ಮೈತ್ರಿಕೂಟದ ನಡುವೆ ಸೀಟು ಹಂಚಿಕೆಯಾಗಲಿದೆ. ಜೆಡಿಎಸ್ ಗೆದ್ದಿರುವ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡಬೇಕು. ಬಿಜೆಪಿ ಮತಗಳು, ಪ್ರಾಬಲ್ಯ ಹೆಚ್ಚಿರುವ ಕಡೆ ಆ ಪಕ್ಷಗಳಿಗೆ ಸ್ಥಾನವನ್ನು ಜೆಡಿಎಸ್ ಕೊಡಬೇಕಾಗುತ್ತದೆ. ಈ ರೀತಿ ಆಧಾರದ ಮೇಲೆ ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆದಿವೆ. ಅಂತಿಮವಾಗಿ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು’ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು
ಮೈಸೂರು ಜಿಲ್ಲಾ ಪಂಚಾಯಿತಿಗೆ 4 ಸ್ಥಾನಗಳು ಹೆಚ್ಚುವರಿಯಾಗಿ ದೊರೆತಿವೆ.
ಮೈಸೂರು ಜಿಪಂ 42 ಸದಸ್ಯ ಸ್ಥಾನವಿತ್ತು. ಇದೀಗ 4 ಹೆಚ್ಚುವರಿ ಸ್ಥಾನಗಳಿಂದ 46ಕ್ಕೆ ಏರಿಕೆಯಾಗಿದೆ. ಸರಗೂರು 2, ಕೆ.ಆರ್.ನಗರ 3, ಸಾಲಿಗ್ರಾಮ 4, ಎಚ್.ಡಿ.ಕೋಟೆ 4, ಪಿರಿಯಾಪಟ್ಟಣ 6, ಹುಣಸೂರು 6, ಮೈಸೂರು 6, ತಿ.ನರಸೀಪುರ 6, ನಂಜನಗೂಡು 9 ಕ್ಷೇತ್ರ ರಚನೆಯಾಗಿದೆ. ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಅಂತೆಯೇ, ಜಿಲ್ಲೆಯ ತಾಲೂಕು ಪಂಚಾಯಿತಿಗಳ ಸದಸ್ಯರ ಸಂಖ್ಯೆ ನಿಗದಿ ಮತ್ತು ಕ್ಷೇತ್ರಗಳ ಗಡಿ ನಿಗದಿಪಡಿಸಿ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಜಿಲ್ಲೆಯ ತಾಪಂ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 160 ಏಕ ಸದಸ್ಯ ಕ್ಷೇತ್ರಗಳನ್ನಾಗಿ ವಿಂಗಡಿಸಿ, ಅವುಗಳ ಗಡಿಯನ್ನು ನಿಗದಿ ಪಡಿಸಲಾಗಿದೆ.
ಸರಗೂರು ತಾಪಂ ಕ್ಷೇತ್ರಗಳ ಸಂಖ್ಯೆ 9, ಕೃಷ್ಣರಾಜನಗರ 9, ಸಾಲಿಗ್ರಾಮ 13, ಎಚ್.ಡಿ.ಕೋಟೆ 16, ಪಿರಿಯಾಪಟ್ಟಣ 22, ಹುಣಸೂರು 23, ಮೈಸೂರು 20, ತಿ.ನರಸೀಪುರ 20, ನಂಜನಗೂಡಿನಲ್ಲಿ 28 ಕ್ಷೇತ್ರಗಳನ್ನು ರಚನೆ ಮಾಡಲಾಗಿದೆ.
ಮುಂದಿನ ಬರುವ ಎಲ್ಲ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಈ ಕುರಿತು ವರಿಷ್ಠ ತೀರ್ಮಾನ ಮಾಡಿದ್ದಾರೆ. ಹೀಗಾಗಿ, ಜಿಪಂ, ತಾಪಂ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಒಂದಾಗಿ ಸ್ಪರ್ಧೆ ಮಾಡಲಿವೆ.
ನರಸಿಂಹಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ
ಜಿಪಂ, ತಾಪಂ ಚುನಾವಣೆಗೆ ತಯಾರಿ ಮಾಡಿಕೊಳ್ಳಲಾಗುತ್ತದೆ. ಶಕ್ತಿ, ಬೂತ್ ಅಧ್ಯಕ್ಷರೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಹಂತ ಹಂತವಾಗಿ ಸಿದ್ಧತೆ ಕೆಲಸಗಳು ಚುರುಕುಗೊಳ್ಳಲಿವೆ. ಆದರೆ, ಮೈತ್ರಿ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅದನ್ನು ನಾವುಗಳು ಪಾಲನೆ ಮಾಡುತ್ತೇವೆ.
ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ