

ಮೈಸೂರು: ಆಹಾರ ಸಂಸ್ಕರಣೆಗಾಗಿ ಉತ್ತಮ ಮತ್ತು ದೊಡ್ಡ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ರಚಿಸುವ ಅಗತ್ಯವಿದೆ. ಇದು ಆಹಾರ ಸಂಸ್ಕರಣಾ ವಲಯಕ್ಕೆ ಸಹಾಯ ಮಾಡುತ್ತದೆ. ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದರು.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ), ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘದ (ಎಎಫ್‌ಎಸ್‌ಟಿಐ) ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ 4 ದಿನಗಳ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಆಹಾರ ಸಂಗ್ರಹಣೆ ಮತ್ತು ಸಂಸ್ಕರಣೆಯಲ್ಲಿ ಆಹಾರ ತಂತ್ರಜ್ಞಾನ ಉದ್ಯಮ ಸವಾಲು ಎದುರಿಸುತ್ತಿದೆ. ಆಹಾರ ಸಂಸ್ಕರಣೆಗಾಗಿ ಕೈಗಾರಿಕಾ ಪರಿಸರ ವ್ಯವಸ್ಥೆ ಬೇಕಾಗಿದೆ. ಇದು ಉತ್ತಮ ಮಟ್ಟದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಆಗಬೇಕು ಎಂದರು.
ಉಪಗ್ರಹ ತಂತ್ರಜ್ಞಾನದ ಮೂಲಕ ಕೃಷಿ ಸಾಲವನ್ನು ಸರಳೀಕರಣಗೊಳಿಸಬಹುದು. ಕೃಷಿ ಸಾಲಕ್ಕಾಗಿ ಅರ್ಜಿದಾರರ ಹಿಂದಿನ ದಾಖಲೆಗಳು ಮತ್ತು ಭವಿಷ್ಯದ ಅಂದಾಜುಗಳನ್ನು ಸಮೀಕ್ಷೆ ಮಾಡಲು ಹಾಗೂ ಪಡೆಯಲು ಸಾಕಷ್ಟು ಸಮಯ ಬೇಕಾಗಿತ್ತು. ಆದರೆ, ಬಾಹ್ಯಾಕಾಶ ತಂತ್ರಜ್ಞಾನದ ಮಧ್ಯಸ್ಥಿಕೆಯಿಂದ ಇದನ್ನು 30 ನಿಮಿಷಗಳಲ್ಲಿ ಒದಗಿಸಬಹುದು. ಇದು ಇಮೇಜಿಂಗ್ ಮತ್ತು ರಿಮೋಟ್ ಸೆನ್ಸಿಂಗ್‌ನ ತಂತ್ರಜ್ಞಾನದ ಪ್ರಯೋಜನವಾಗಿದೆ ಎಂದು ತಿಳಿಸಿದರು.
ಸುಸ್ಥಿರ ಕೃಷಿ ಅಭಿವೃದ್ಧಿಗೆ ಇಸ್ರೋ ಸಹಕಾರ ನೀಡುತ್ತಿದ್ದು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಮೂಲಕ ಉಪಗ್ರಹ ಕಳುಹಿಸಿದ ದತ್ತಾಂಶದ ಆಧಾರದ ಮೇಲೆ ಬೆಳೆಯ ಫಸಲಿನ ಅವಧಿ ಹಾಗೂ ಇಳುವರಿ ಎಷ್ಟಿದೆ ಎಂಬುದನ್ನು ಊಹಿಸಲಾಗುತ್ತಿದೆ. ಈಗಾಗಲೇ 7 ಬೆಳೆಗಳ ಫಸಲು ಅವಧಿಯನ್ನು ನಿರ್ಧರಿಸಿ ಕೃಷಿ ಇಲಾಖೆಗೆ ಮಾಹಿತಿ ನೀಡುತ್ತಿದ್ದು, ಅದನ್ನು 20 ಬೆಳೆಗಳಿಗೆ ವಿಸ್ತರಿಸಲಾಗುತ್ತಿದೆ ಎಂದರು.
ಕೇರಳದಲ್ಲಿ ಉಂಟಾಗಿದ್ದ ತೆಂಗು ರೋಗಕ್ಕೆ ರಿಮೋಟ್ ಸೆನ್ಸಿಂಗ್ ವಿಧಾನದ ಮೂಲಕ ಸಂಶೋಧನೆ ನಡೆಸಿ ಪರಿಹಾರ ಕ್ರಮ ಕಂಡುಕೊಳ್ಳಲಾಗಿದೆ. ಅದನ್ನು ಇದೀಗ ಎಲ್ಲ ಬೆಳೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ರೈತರ ಆದಾಯ ಮೂಲವನ್ನು ಗಟ್ಟಿಗೊಳಿಸಬೇಕಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು, ತಂತ್ರಜ್ಞಾನಿಗಳು ಕೆಲಸ ಮಾಡಬೇಕಿದೆ ಎಂದರು.
ಸ್ವಾತಂತ್ರೃ ಪೂರ್ವದಲ್ಲಿ ದೇಶ ಆಹಾರ ಸಮಸ್ಯೆಯಿಂದ ತತ್ತರಿಸಿತ್ತು. ಇದರಿಂದಾಗಿ ಜೀವಿತಾವಧಿಯೂ ಕುಗ್ಗಿತ್ತು. ಆದರೀಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಕಲ್ಪಿಸಿಕೊಡಲಾಗಿದೆ. ಗುಣಮಟ್ಟದ ಆಹಾರದಿಂದಾಗಿ ಜೀವಿತಾವಧಿ 75ವರ್ಷಕ್ಕೆ ಏರಿಕೆಯಾಗಿದೆ. ಇದು ದೇಶದ ಪ್ರಮುಖ ಸಾಧನೆ ಎಂದು ತಿಳಿಸಿದರು.
ಸುಸ್ಥಿರ ಆಹಾರ ಉತ್ಪಾದನೆ ಮತ್ತು ವಿತರಣೆ ಈಗಿನ ಸವಾಲು. ಇದರಲ್ಲಿ ಸ್ಥಿರತೆಯನ್ನು ಸಾಧಿಸಬೇಕಿದೆ. ಯಾವ ಪ್ರದೇಶದಲ್ಲಿ, ಯಾವ ಮಣ್ಣಿನಲ್ಲಿ, ಯಾವ ಬೆಳೆ ಸೂಕ್ತ ಎಂಬುದನ್ನು ಖಚಿತಪಡಿಸಬೇಕಿದೆ. ಮಳೆ ಪ್ರಮಾಣ, ಹವಾಮಾನ ಸೇರಿದಂತೆ ವಿವಿಧ ಪರಿಸರ ಗುಣಲಕ್ಷಣಗಳ ಆಧಾರದ ಮೇಲೆ ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕಿದೆ. ಇದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ, ಇನ್ನಿತರ ತಂತ್ರಜ್ಞಾನವನ್ನೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಇದರೊಂದಿಗೆ, ಹವಾಮಾನ, ಮಳೆ ಆಧಾರದ ಮೇಲೆ ಸುಸ್ಥಿರ ಕೃಷಿಗೆ ಉತ್ತೇಜನ ನೀಡಬೇಕಿದೆ ಎಂದರು.
ಹವಾಮಾನ ಹಾಗೂ ವಾತಾವರಣದ ಬದಲಾವಣೆ ಮಾಹಿತಿಯನ್ನು ಸಂಸ್ಥೆ ನೀಡುತ್ತಿದೆ. ಸಮುದ್ರದ ಉಷ್ಣತೆ, ನೀರಿನಲ್ಲಿರುವ ಪೋಷಕಾಂಶಗಳು, ಮೀನಿನ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಉಪಗ್ರಹ ಪರೀಕ್ಷಿಸುತ್ತಿವೆ. ಹೆಚ್ಚು ಮೀನು ಸಿಗುವ ಸ್ಥಳಗಳನ್ನು ಕರಾವಳಿಯ ಮೀನುಗಾರರಿಗೆ ಹೈದರಾಬಾದ್‌ನ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ಮೂಲಕ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭೂ ಆಳದಲ್ಲಿರುವ ಅಂತರ್ಜಲ ಸಾಂದ್ರತೆಯನ್ನೂ ಬಾಹ್ಯಾಕಾಶ ತಂತ್ರಜ್ಞಾನದಿಂದ ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಸುಲಭಗೊಳಿಸಲಾಗಿದೆ. ಇದರಿಂದಾಗಿ ಕೊಳವೆಬಾವಿ ಕೊರೆಯುವ ಕೆಲಸದಲ್ಲಿ ಸಫಲತೆ ಶೇ.90ಕ್ಕೆ ಹೆಚ್ಚಿದೆ. ಮೊದಲು ಕೊಳವೆಬಾವಿ ವಿಫಲ ಪ್ರಮಾಣ ಹೆಚ್ಚಿತ್ತು ಎಂದರು.
ಆಹಾರ ಭದ್ರತೆ ಹಾಗೂ ಬೆಳೆ ಇಳುವರಿ ಹೆಚ್ಚಿಸಲೂ ಇಸ್ರೋ ನೆರವಾಗುತ್ತಿದೆ. ಆದರೀಗ ಜಾಗತಿಕ ಹವಾಮಾನ ಬದಲಾವಣೆ ನೇರವಾಗಿ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ವಿವಿಧ ಕ್ಷೇತ್ರಗಳ ವಿಜ್ಞಾನಿಗಳು ಸಾಮೂಹಿಕ ನಾಯಕತ್ವದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡಬೇಕಿದೆ. ಇದಕ್ಕೆ ಇಸ್ರೋ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡಲಿದೆ ಎಂದು ಡಾ.ಎಸ್.ಸೋಮನಾಥ್ ಹೇಳಿದರು.
ಸೂಕ್ತ ತಂತ್ರಜ್ಞಾನ ಬಳಕೆಯಿಂದ ಆಹಾರ ಗುಣಮಟ್ಟ ವೃದ್ಧಿಸಬೇಕಿದೆ. ಬಹುಕಾಲದವರೆಗೆ ಅದು ಕೆಡದಂತೆ, ಗುಣಮಟ್ಟ ಹಾಳಾಗದಂತೆ ಕಾಯ್ದುಕೊಳ್ಳಬೇಕಿದೆ. ಇದರಿಂದ ಜನರಿಗೆ ಉತ್ತಮ ಆಹಾರ ಕಲ್ಪಿಸಿಕೊಡಲು ಅನುಕೂಲವಾಗಲಿದೆ ಎಂದರು.
ವಿವಿಧ ಕ್ಷೇತ್ರಗಳ ವಿಜ್ಞಾನಿಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡು ಜಂಟಿಯಾಗಿ ಕಾರ್ಯನಿರ್ವಹಿಸುವ ಕಾಲ ಎದುರಾಗಿದೆ. ಆಯಾ ಸಂಸ್ಥೆಗಳ ತಂತ್ರಜ್ಞಾನಕ್ಕೆ ಒಂದಷ್ಟು ಮಿತಿಗಳು ಇವೆ. ಜತೆಗೆ, ಈ ರೀತಿ ಸಂಶೋಧನಾ ಕೆಲಸಗಳು ಚದುರಿಹೋಗಿವೆ. ಇವುಗಳೆಲ್ಲ ಒಂದು ವೇದಿಕೆಯಡಿ ಕಾರ್ಯಾಚರಣೆ ಮಾಡಬೇಕು. ಆಗ ಸಾಧಕ-ಬಾಧಕ, ಲೋಪ-ದೋಷಗಳಿಗೆ ಆಯಾ ಹಂತದಲ್ಲೇ ಪರಿಹಾರ ಕಂಡುಕೊಂಡು ಮುಂದುವರಿಯಲು ಅನುಕೂಲವಾಗಲಿದೆ. ವಿಜ್ಞಾನ- ತಂತ್ರಜ್ಞಾನದ ಗರಿಷ್ಠ ಪ್ರಯೋಜನವನ್ನು ಜನಕಲ್ಯಾಣಕ್ಕೆ ಒದಗಿಸಬಹುದಾಗಿದೆ ಎಂದರು.
ನಗರದಲ್ಲಿರುವ ಉತ್ತಮ ಸಂಶೋಧನಾ ಸಂಸ್ಥೆಗಳಾದ ಸಿಎಫ್‌ಟಿಆರ್‌ಐ ಮತ್ತು ಡಿಎಫ್‌ಆರ್‌ಎಲ್‌ಗೆ ಮೊದಲ ಬಾರಿ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ವೀಕ್ಷಣೆ ಮಾಡಿದೆ. ಉಭಯ ಸಂಸ್ಥೆಗಳ ನುರಿತ ಸಿಬ್ಬಂದಿಯೊಂದಿಗೆ ಅನೇಕ ಸಲ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ಮಾತನಾಡಿದ ಕೇಂದ್ರ ವೈಜ್ಞಾನಿಕ, ಕೈಗಾರಿಕಾ ಸಂಶೋಧನೆಯ ಕಾರ್ಯದರ್ಶಿ, ಸಿಎಸ್‌ಐಆರ್ ಮಹಾನಿರ್ದೇಶಕಿ ಡಾ.ಎನ್.ಕಲೈಸೆಲ್ವಿ, ಆಹಾರ ತಂತ್ರಜ್ಞಾನ ದೇಶದಲ್ಲಿ ಪ್ರವರ್ಧಮಾನದಲ್ಲಿ ಪ್ರಗತಿ ಕಾಣುತ್ತಿದೆ. ಆಹಾರ ಸಂಸ್ಕರಣೆ, ಸಂಶೋಧನೆ, ಆಹಾರ ಪ್ಯಾಕಿಂಗ್, ವಿಜ್ಞಾನ-ತಂತ್ರಜ್ಞಾನ ಆವಿಷ್ಕಾರದಲ್ಲಿ ಸಿಎಫ್‌ಟಿಆರ್‌ಐ ನಾಯಕತ್ವ ತೆಗೆದುಕೊಂಡಿದೆ ಎಂದು ಬಣ್ಣಿಸಿದರು.
ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಸಿರಿಧಾನ್ಯ ಸಂಶೋಧನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದ ಅವರು, ಇಂತಹವೊಂದು ಸಂಸ್ಥೆ ಸ್ಥಾಪನೆಗೆ ಮೈಸೂರಿನಲ್ಲಿ ಜಾಗ ಕಲ್ಪಿಸಿಕೊಟ್ಟ ಮೈಸೂರು ಸಂಸ್ಥಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಎಎಫ್‌ಎಸ್‌ಟಿಐ ಅಧ್ಯಕ್ಷ ಡಾ.ಎನ್.ಭಾಸ್ಕರ್, ಡಿಎಫ್‌ಆರ್‌ಎಲ್ ಮುಖ್ಯಸ್ಥ ಡಾ.ಅನಿಲ್ ದತ್ ಸೆಮ್ವಾಲ್, ಸಮ್ಮೇಳನ ಸಂಯೋಜಕ ಡಾ.ತಾನಾಜಿ ಜಿ.ಕುದ್ರೆ, ಡಾ.ಸುರೇಶ್ ಡಿ.ಸಖರೆ ಇನ್ನಿತರರಿದ್ದರು.
9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ, ಉಪನ್ಯಾಸ ಕಾರ್ಯಕ್ರಮಗಳು ನಗರದ ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯಲಿವೆ.
ಮುಕ್ತ ದಿನ: ಎರಡು ದಿನ ಮಾತ್ರ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಡಿ. 8ರಂದು ಮಧ್ಯಾಹ್ನ 1ರಿಂದ ಸಂಜೆ 5 ಗಂಟೆವರೆಗೆ ಹಾಗೂ ಡಿ. 9ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಸಿಎಫ್‌ಟಿಆರ್‌ಐನ ಉತ್ತರ ದ್ವಾರದಿಂದ ಪ್ರವೇಶ ದೊರೆಯಲಿದೆ.