

ಕೊಪ್ಪಳ: ಜೀವನದಲ್ಲಿ ಸಾಧನೆ ಮಾಡಲು ತುಡಿತ ಹಾಗೂ ಛಲವಿರಬೇಕು. ಸಾಧನೆಗೆ ಅಂಗವಿಕಲತೆ ಅಡ್ಡಿಯಲ್ಲ ಎಂದು ಅಂರಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಹೇಳಿದರು.
ನಗರದ ಗವಿಮಠದ ಆವರಣದಲ್ಲಿ ಅಂಗವಿಕಲರ ನೌಕರರ ಸಂಘ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಧನೆ ಮಾಡಲು ಕೇವಲ ಕನಸು ಕಟ್ಟಿದರೆ ಸಾಲದು. ಅದಕ್ಕೆ ತಕ್ಕಂತೆ ಪರಿಶ್ರಮ ಪಡಬೇಕು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎನ್ನುವುದಕ್ಕೆ ನಾನೇ ಉತ್ತಮ ಉದಾಹರಣೆ. ಯಶಸ್ಸು ಸಾಧಿಸಲು ಹಂಬಲಿಸುವ ವ್ಯಕ್ತಿಗಳು ಎಂದಿಗೂ ಕೈ ಕಟ್ಟಿಕೂರಬಾರದು. ಸಾಧನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ವಿಶೇಷವಾಗಿ ಅಂಗವಿಕಲತೆಗೆ ಒಳಗಾದವರು ಮೊದಲು ತಮ್ಮಲ್ಲಿನ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಅಂಗವಿಕಲರಿಗಾಗಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಒಲಂಪಿಕ್ ಕ್ರೀಡೆಗಳನ್ನು ಆಯೋಜಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಂಗವಿಕಲರ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಕವಾಗಿರುತ್ತದೆ. ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಗಳ ಅವಶ್ಯಕತೆಯಿದೆ. ಅಂಗವಿಕಲರಿಗಾಗಿ ಸರ್ಕಾರ ನಾನಾ ಕ್ರೀಡೆ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಅಂಗವಿಕಲ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ, ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ, ಅಂಗವಿಕಲ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಅಂಗವಿಕಲ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಂದಪ್ಪ ಇದ್ಲಿ, ನಿರ್ದೇಶಕ ಪ್ರಶಾಂತ ಪಾಟೀಲ್, ಮಾರುತಿ ಆಪ್ಟೆ, ರಾಜು ಬಂಗಾರಶೆಟ್ಟರ್ ಇದ್ದರು.