

ಚಳ್ಳಕೆರೆ: ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಸಾಮಾಜಿಕವಾಗಿ ಪ್ರೋತ್ಸಾಹ, ಅವಕಾಶ ಕಲ್ಪಿಸುವುದು ಅಗತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆ ದೇಶದ ಸಂಸ್ಕೃತಿಯ ಸ್ಥಾನದಲ್ಲಿ ಇದ್ದಾಳೆ. ನಮ್ಮನ್ನೆಲ್ಲ ಪೋಷಿಸುವ ಭೂಮಿಯನ್ನು ಮಹಿಳಾ ತಾಯಿಗೆ ಹೋಲಿಸುತ್ತೇವೆ. ಒಂದು ಕುಟುಂಬದ ಸಮಗ್ರ ಬೆಳವಣಿಗೆಗೆ ಮಹಿಳೆ ಪಾತ್ರವೇ ಪ್ರಧಾನವಾಗಿದೆ ಎಂದರು.
ಸಾಮಾಜಿಕ, ರಾಜಕೀಯವಾಗಿ ಪ್ರಬುದ್ಧ ಮಾನಕ್ಕೆ ಮಹಿಳೆ ಬರಬೇಕಾಗಿದೆ. ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಆದ್ಯತೆ ಸಿಗಬೇಕಾಗಿದೆ ಎಂದು ತಿಳಿಸಿದರು.
ಸಾಹಿತಿ ತಿಪ್ಪಣ್ಣಮರಿಕುಂಟೆ ಮಾತನಾಡಿ, ನಾಲ್ಕು ಸಾವಿರ ವರ್ಷಗಳ ಹಿಂದೆ ಮಹಿಳೆಯರಿಗೆ ಸಮಾನ ಅವಕಾಶವಿತ್ತು. ರಾಜನೀತಿ ಆಲಯದಲ್ಲಿ 50 ಜನ ಬ್ರಹ್ಮವಾದ ಪುರುಷರಿದ್ದಲ್ಲಿ ಐವತ್ತು ಬ್ರಹ್ಮವಾದಿಯರು ಸಮಾನವಾಗಿ ಕುಳಿತು ಚರ್ಚಿಸುವ ಸಂಸ್ಕೃತಿ ಇತ್ತು ಎಂದು ಹೇಳಿದರು.
ಕೋಲಾಟ, ಕರಗ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಪೂಜಾ ಕುಣಿತ ಸೇರಿ ಕನ್ನಡ ಗೀತಗಾಯನ, ವಚನ ಗಾಯನ, ಸುಗಮ ಸಂಗೀತ, ಜಾನಪದ ಸಂಗೀತ, ಸಮೂಹ ನೃತ್ಯ ಗಮನ ಸೆಳೆಯಿತು.
ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದ ಹಂತದಲ್ಲಿ ಅವಕಾಶಗಳಿವೆ ಎಂದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಸದಸ್ಯ ಜಿ.ವೀರೇಶ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಬೋರಯ್ಯ, ಖಾದರ್, ಶಿಕ್ಷಕ ಆರ್.ಮಾರುತೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ನಿಜಲಿಂಗಪ್ಪ, ಕೆ.ಪಿ.ಎಂ.ಗಣೇಶಯ್ಯ ಇದ್ದರು.