

ಚಳ್ಳಕೆರೆ: ಮದ್ಯಮುಕ್ತ ಗ್ರಾಮ ಮಾಡಲು ಪಣ ತೊಟ್ಟಿರುವ ತಾಲೂಕಿನ ಸೂರನಹಳ್ಳಿ ಗ್ರಾಮಸ್ಥರು ಈ ಕುರಿತು ಸಭೆ ನಡೆಸಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಹಳ್ಳಿಯಲ್ಲಿ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂ., ಮದ್ಯ ಸೇವಿಸಿ ಗಲಾಟೆ ಮಾಡಿದರೆ 5 ಸಾವಿರ ರೂ. ದಂಡ ವಿಧಿಸುವ ಖಡಕ್ ಎಚ್ಚರಿಕೆ ನೀಡಲಾಗಿದೆ.
ಮಂಗಳವಾರ ಈ ಕುರಿತು ಸಭೆ ನಡೆಸಲಾಗಿದ್ದು, ಮದ್ಯಮುಕ್ತ ಗ್ರಾಮದ ನಿರ್ಮಾಣಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳು ಮದ್ಯ ಮಾರಾಟ ನಿಷೇಧವಾಗಿತ್ತು. ಇದರಿಂದ ಮದ್ಯ ವ್ಯಸನಿಗಳಲ್ಲಿ ಬದಲಾವಣೆ ಕಂಡುಬಂದಿತ್ತು.
ಕುಟುಂಬಗಳಲ್ಲಿ ಕಲಹ ಕಡಿಮೆಯಾಗಿದ್ದವು. ಬೀದಿಗಳಲ್ಲಿ ಕುಡುಕರ ಹಾವಳಿ ಇರಲಿಲ್ಲ. ಆದರೆ, ಇತ್ತೀಚೆಗೆ ಮದ್ಯ ಮಾರಾಟ ಆರಂಭವಾದ ಕಾರಣ ಮತ್ತೆ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂ., ಕುಡಿದು ಗಲಾಟೆ ಮಾಡಿದರೆ 5 ಸಾವಿರ ರೂ. ದಂಡ ಹಾಕುವ ಕುರಿತು ನಿರ್ಧರಿಸಲಾಗಿದೆ.
ಗ್ರಾಮಸ್ಥರಾದ ಸೂರನಹಳ್ಳಿ ಶ್ರೀನಿವಾಸ್, ಟಿ.ನರಸಿಂಹಯ್ಯ, ಎಂ.ವೀರಭದ್ರಪ್ಪ, ಸಿ.ನಾಗರಾಜ, ಕೆ.ನಿಂಗಣ್ಣ, ಎಚ್.ತಿಮ್ಮಪ್ಪ, ಟಿ.ಎಚ್.ತಿಮ್ಮಣ್ಣ, ಈ.ತಿಪ್ಪೇಸ್ವಾಮಿ, ಸಾವಿತ್ರಮ್ಮ, ಸುನೀತಾ, ಚಿಕ್ಕಣ್ಣ, ಎಸ್.ಟಿ.ಸೂರ್ಯಪ್ರಕಾಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮದ್ಯ ಖರೀದಿಸಿ ಗುಂಡಿಗೆ ಹಾಕಿದರು!: ಮದ್ಯ ಮಾರಾಟಗಾರರು ತಾವು ಖರೀದಿಸಿ ತಂದ ಮದ್ಯ ಮಾರಾಟ ಮಾಡಲು ಐದು ದಿನ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಕಾರಣಕ್ಕೆ ಗ್ರಾಮದ ಮುಖಂಡರೇ ಮದ್ಯ ಖರೀದಿಸಿ ಗುಂಡಿಗೆ ಹಾಕಿ ನಾಶ ಪಡಿಸಿದ್ದಾರೆ. ಇನ್ನು ಮುಂದೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಕರಾರು ಪತ್ರಕ್ಕೆ ಅಂಗಡಿ ಮಾಲೀಕರಿಂದ ಸಹಿ ಹಾಕಿಸಿಕೊಳ್ಳಲಾಗಿದೆ.