

ಚಳ್ಳಕೆರೆ: ವಿವಿ ಸಾಗರದಿಂದ ವೇದಾವತಿ ನದಿಗೆ ಬರಬೇಕಾಗಿರುವ 0.25 ಟಿಎಂಸಿ ಅಡಿ ನೀರು ಹರಿಸುವಲ್ಲಿ ಉಂಟಾಗಿರುವ ವಿವಾದಕ್ಕೆ ತೆರೆ ಬಿದ್ದಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಸಾರಿಗೆ ಬಸ್ ನಿಲ್ದಾಣ ಸಮೀಪ ಬುಧವಾರ ಭೋಜನಾಲಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಿ ಪೂರ್ಣಿಮಾ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
ಏ.23ರಂದು ವಿವಿ ಸಾಗರದಿಂದ ನೀರು ಬಿಡಲಾಗಿತ್ತು. ತಾಂತ್ರಿಕ ಸಮಸ್ಯೆ, ಕೆಲ ಗೊಂದಲದಿಂದ ಸ್ಥಳೀಯ ಶಾಸಕಿ ಪೂರ್ಣಿಮಾ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ. ನನ್ನ ಕ್ಷೇತ್ರದ 8 ತಾಲೂಕುಗಳಲ್ಲಿ ಯಾವುದೇ ವಿವಾದ ಉಂಟಾಗದೆ ಸಮನ್ವಯತೆ ಕಾಪಾಡಿಕೊಳ್ಳುವುದು ನನ್ನ ಜವಾಬ್ದಾರಿ. ತಾಲೂಕಿನ ಗಡಿ ಭಾಗ ಪರಶುರಾಮಪುರದ ಕೋಟೆಕೆರೆ ಭಾಗಕ್ಕೆ ಸಂಪೂರ್ಣ 0.25 ಟಿಎಂಸಿ ಅಡಿ ನೀರು ಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮುಖಂಡರಾದ ಬಿ.ಎಸ್.ಶಿವಪುತ್ರಪ್ಪ, ದಿನೇಶ್ ರೆಡ್ಡಿ ಇತರರಿದ್ದರು.