ಚಳ್ಳಕೆರೆ ತಹಸೀಲ್ದಾರ್ ವರ್ತನೆಗೆ ಆಕ್ರೋಶ

CONGRESS PROTEST (1)-03
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕು ತಹಸೀಲ್ದಾರ್ ಎನ್.ರಘುಮೂರ್ತಿ ಅಧಿಕಾರಿ ಎಂಬುದನ್ನು ಮರೆತು ರಾಜಕಾರಣಿಯಂತೆ ವರ್ತಿಸುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷಾತೀತವಾಗಿ ನಡೆದುಕೊಳ್ಳದೆ ಬಿಜೆಪಿ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿದ್ದು, ನಡವಳಿಕೆಯೂ ಅದೇ ರೀತಿ ಇದೆ. ಈ ಮೂಲಕ ತಾಲೂಕಿನಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೂವರೆ ವರ್ಷದಿಂದ ಈ ಭಾಗದಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಕಾರ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಸಭೆ-ಸಮಾರಂಭಗಳಲ್ಲಿ ಜನಪ್ರತಿನಿಧಿಗಳಂತೆ ಜನರಿಗೆ ಭರವಸೆ ನೀಡುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮವಾಗಲಿ ಪ್ರಚಾರ ಕೈಗೊಳ್ಳುವಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡುವುದನ್ನು ಬಿಟ್ಟು ಆಶ್ವಾಸನೆ ನೀಡುತ್ತಿದ್ದಾರೆ. ಜತೆಗೆ ಚಳ್ಳಕೆರೆ ಶಾಸಕರ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ ಅವರು, ತಾಪಂ ಕೆಡಿಪಿ ಸಭೆಯಲ್ಲಿ ಶಾಸಕರ ವಿರುದ್ಧ ಮಾತನಾಡಿ ಹೊರನಡೆದು ದುರ್ವಾರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಲ್ಲೂ ನಿಯಮಾನುಸಾರ ಮಾಡದೆ ಆರ್ಥಿಕವಾಗಿ ಹೆಚ್ಚು ವ್ಯಯ ಮಾಡಿದ್ದಾರೆ. ಇವರು ಅಧಿಕಾರಿಯೋ, ಜನಪ್ರತಿನಿಧಿಯೋ ತಿಳಿಯದಾಗಿದೆ. ಕ್ಷೇತ್ರದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮಧ್ಯೆ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಧಿಕಾರಿ ಅವರ ಮೇಲಿದ್ದು, ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾನಂದಿನಿಗೌಡ, ಮುಖಂಡರಾದ ಜಾನವಿ ನಾಗರಾಜ್, ಮಹಡಿ ಶಿವಮೂರ್ತಿ, ಎಲ್.ತಿಪ್ಪೇಸ್ವಾಮಿ, ಎನ್.ಡಿ.ಕುಮಾರ್, ಅಶೋಕ್ ನಾಯ್ಡು, ಎಚ್.ಅಂಜನಪ್ಪ, ಸೈಯದ್ ಖುದ್ದೂಸ್, ನರಹರಿ, ಮೋಕ್ಷಾ ರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ಗುರುಮೂರ್ತಿ, ಪಾಪಣ್ಣ, ಎಸ್.ಎನ್.ರವಿಕುಮಾರ್, ಎನ್.ನಾಗರಾಜ್, ಮೋಹನ್ ಪೂಜಾರಿ, ಕೆ.ಕೃಷ್ಣಪ್ಪ, ತಾರಾ, ಮಂಜುಳಾ ಇತರರಿದ್ದರು.

ಶಿಸ್ತು ಕ್ರಮಕ್ಕೆ ಆಗ್ರಹಿಸಿ ಮುಷ್ಕರ

ಚಳ್ಳಕೆರೆ ತಾಪಂ ಸಭಾಂಗಣದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಅವರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ‌್ಯ ಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸರ್ಕಾರಿ ಅಧಿಕಾರಿ ಎನ್ನುವ ಪ್ರಜ್ಞೆಯಿಲ್ಲದೆ ಸರ್ವಾಧಿಕಾರಿ ಆಗಿರು ತಹಸೀಲ್ದಾರ್, ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ, ರವಿಕುಮಾರ್ ನಾಯ್ಕ, ಕಾರ‌್ಯದರ್ಶಿ ಜಗದೀಶ್, ಅವಿನಾಶ್,ನಾಗರಾಜ್, ಮುತ್ತು, ಅಖಿಲೇಶ್, ರೇಣುಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net