

ಚಳ್ಳಕೆರೆ: ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಯಾವ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
1800 ಜನಸಂಖ್ಯೆ ಇರುವ ಗ್ರಾಮದಲ್ಲಿ ಎರಡು ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಲಭ್ಯತೆ ಇರುವ ಒಂದು ಬೋರಿನ ನೀರಿನಲ್ಲಿ ಎಂಟು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯ ಪಂಚಾಯಿತಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಸಲುವಾಗಿ ಊರ ಪಕ್ಕದಲ್ಲಿ ಬೋರ್ ಕೊರೆಸಿ ಮೂರು ತಿಂಗಳಾಗಿದೆ. ಇದುವರೆಗೂ ಪೈಪ್‌ಲೈನ್ ಮಾಡಿ ಮೋಟಾರ್ ಇಳಿಸುವ ಕೆಲಸ ಮಾಡಿಲ್ಲ. ಇನ್ನೂ ಗ್ರಾಮದಲ್ಲಿ ನಾಮಕಾವಾಸ್ತೆಗೆ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಘಟಕಕ್ಕೆ ನೀರಿನ ಅನುಕೂಲ ಇಲ್ಲದೆ ಶುದ್ಧ ನೀರಿನ ಭಾಗ್ಯ ಗ್ರಾಮಸ್ಥರು ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಕಿರಣ್ ಹೇಳಿಕೆ: ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ಈಗಾಗಲೇ ಗ್ರಾಮದ ಸಮೀಪ 9 ಬೋರ್‌ವೆಲ್ ಕೊರೆಸಲಾಗಿದೆ. ಇದರಲ್ಲಿ ಕೇವಲ ಎರಡರಲ್ಲಿ ನೀರು ಲಭ್ಯತೆ ಆಗಿದೆ. ಪೈಪ್‌ಲೈನ್ ಮತ್ತು ಮೋಟಾರ್ ಅಳವಡಿಕೆಗೆ ಟೆಂಡರ್ ಕಾರ್ಯ ನಡೆಯಬೇಕಿದೆ. ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಪಂಚಾಯಿತಿಗೆ ತಿಳಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು.