

ಚಳ್ಳಕೆರೆ: ತಾಲೂಕಿನ ಗಂಜಿಗುಂಟೆ ಲಂಬಾಣಿಹಟ್ಟಿ ಗ್ರಾಮದಲ್ಲಿ ವಿವಾಹಿತೆ ಬುಧವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಜಮುನಾ (22) ಮೃತ ಮಹಿಳೆ. ಅದೇ ಗ್ರಾಮದ ಮೋಹನ್ ಎಂಬಾತ ಪ್ರೀತಿಸಿ, ಎರಡು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಗಂಡ, ಮೈದುನ ಮತ್ತು ಅತ್ತೆ, ನಾದಿನಿ ಇವರ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವೇಳೆ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸ್ ಉಪಅಧೀಕ್ಷಕ ಶ್ರೀಧರ್ ತನಿಖೆ ಕೈಗೊಂಡಿದ್ದಾರೆ.
ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ: ಚಳ್ಳಕೆರೆ ನಗರದ ಹೊಸ ಬ್ಯಾಡರಹಟ್ಟಿ ನಿವಾಸಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಓಬಯ್ಯ (65) ತನ್ನ ಮನೆ ಮಹಡಿ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮಾನಸಿಕ ಅಸ್ವಸ್ಥನಾಗಿದ್ದ ಈತನಿಗೆ ಆಸ್ಪತ್ರೆಗೆ ತೋರಿಸಿದ್ದರೂ ಗುಣಮುಖವಾಗಿರಲಿಲ್ಲ ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಐವರು ಗಾಯ: ಚಿತ್ರದುರ್ಗ ತಾಲೂಕು ದಂಡಿನ ಕುರುಬರಹಟ್ಟಿ ಗೇಟ್ ಬಳಿ ಗುರುವಾರ ಮುಂಜಾನೆ ಕಾರಿಗೆ ಲಾರಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಚಳ್ಳಕೆರೆ ತಾಲೂಕು ತಳಕು ಗ್ರಾಮದ ಐವರು ಗಾಯಗೊಂಡಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.