

ಚಳ್ಳಕೆರೆ: ಶರಣರನ್ನು ನೆನೆಯುವುದೇ ಮಹಾಶಿವರಾತ್ರಿ ಆಚರಣೆ ಮೂಲ ಉದ್ದೇಶ ಎಂದು ಜಿಲ್ಲಾ ಬಸವ ಮಂಟಪದ ವಿಜಯಲಕ್ಷ್ಮಿ ಮಾತಾಜಿ ಹೇಳಿದರು.
ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಶುಕ್ರವಾರ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಕಾಯಕವೆ ಕೈಲಾಸ ಎಂದು ತೋರಿಸಿಕೊಟ್ಟ ಬಸವಣ್ಣನವರ ಕಲ್ಯಾಣ ಕ್ರಾಂತಿಗೆ ದುಡಿದ 770 ಅಮರ ಗಣಾಂಗಗಳ ಶರಣರನ್ನು ನೆನೆಯುವುದು ಶಿವರಾತ್ರಿಯ ವಾಡಿಕೆಯಾಗಿದೆ ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ವಚನಕಾರರನ್ನು ಮತ್ತು ಸಾಮಾಜಿಕ ಬದಲಾವಣೆಯ ಚಿಂತಕರನ್ನು ಪೋಷಣೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಶಿವರಾತ್ರಿ ಆಚರಣೆಯಲ್ಲಿ ಸಮಾಜದ ಧರ್ಮವನ್ನು ತಿಳಿಯುವ ಕೆಲಸವಾಗಬೇಕು. ಸಮಾನತೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಬದಲಾವಣೆಯೇ ಹಬ್ಬಗಳ ಪದ್ದತಿ ಆಗಬೇಕು ಎಂದು ತಿಳಿಸಿದರು.
ಬಸವದಳದ ಪದಾಧಿಕಾರಿಗಳಾದ ಪ್ರತಿಭಾ ಬಸವರಾಜ್, ಎಂ.ಎಸ್.ತಿಪ್ಪೇಸ್ವಾಮಿ, ಎಚ್.ಹನುಮಂತಪ್ಪ, ಬುಡ್ನಹಟ್ಟಿ ಚಂದ್ರಣ್ಣ, ಸಾಣೀಕೆರೆ ರಘು, ತಿಪ್ಪಮ್ಮ, ಶರಣಮ್ಮ ಮತ್ತಿತರರಿದ್ದರು.