

ಚಳ್ಳಕೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನೇ ಮರೆತುಬಿಟ್ಟಿದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಿ ಜನಪರ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ದೊಡ್ಡಮಟ್ಟದ ಹೋರಾಟ ರೂಪಿಸುವುದು ತುರ್ತು ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಿಂದ ಮೊಳಕಾಲ್ಮೂರಿಗೆ ತೆರಳುವ ಮಾರ್ಗ ಮಧ್ಯೆ ಶನಿವಾರ ನಗರದ ಶಾಸಕರ ಭವನಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಕೂಡಲೇ ಬಗೆಹರಿಸಿಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಗ್ರಾಮ ಪಂಚಾಯಿತಿ ಸೇರಿ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಳಮಟ್ಟದಿಂದ ಪಕ್ಷ ಸಂಘಟನೆಗೆ ನಾಯಕರು ಮುಂದಾಗಲಿದ್ದಾರೆ ಎಂದರು.
ಚಳ್ಳಕೆರೆ ಕ್ಷೇತ್ರದಿಂದ 2ನೇ ಬಾರಿಗೆ ಗೆಲುವು ಸಾಧಿಸಿದರು ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಗರದ ವಿಶಾಲ ರಸ್ತೆಗಳು ಅಭಿವೃದ್ಧಿಯ ದಿಕ್ಸೂಚಿ ಹೇಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರ ಭವನ ಪಕ್ಷಾತೀತವಾಗಿದೆ. ರಾಜಕೀಯ ಮತ್ತು ಸಂಘಟಿತ ವ್ಯಕ್ತಿಗಳ ಹೋರಾಟದ ಬದುಕನ್ನು ತಿಳಿಸುವ ರೀತಿಯಲ್ಲಿ ಭಾವಚಿತ್ರಗಳ ಸಹಿತ ಆಕರ್ಷಣಿಯವಾಗಿ ಕಾರ್ಯಾಲಯ ರೂಪಿಸಿದ್ದಾರೆ. ಇದು ಎಲ್ಲ ಜನಪ್ರತಿನಿಧಿಗಳಿಗೆ ಮಾದರಿ ಆಗಬೇಕು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಡಿ.ಸುಧಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಜಿಪಂ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಶಶಿಕಲಾ ಸುರೇಶಬಾಬು, ಮುಖಂಡರಾದ ಎಚ್.ಎಸ್.ಸೈಯದ್, ಲಕ್ಷ್ಮೀದೇವಿ, ಆರ್.ಪ್ರಸನ್ನಕುಮಾರ್, ಪ್ರಹ್ಲಾದ, ಗಾಂಧಿನಗರ ಕೃಷ್ಣ, ಅಂಜಿನಪ್ಪ ಇತರರಿದ್ದರು.