

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ತಾಲೂಕು ಕೇಂದ್ರ ಚಳ್ಳಕೆರೆಯಿಂದ ಐದೇ ಕಿಲೋ ಮೀಟರ್ ದೂರದಲ್ಲಿರುವ ಸೋಮಗುದ್ದು ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಅಂದಾಜು 2400 ಜನಸಂಖ್ಯೆ ಹೊಂದಿರುವ ಊರಲ್ಲಿ ಸಂಚಾರ ಯೋಗ್ಯ ರಸ್ತೆಗಳಿಲ್ಲ. ಗ್ರಾಮದೊಳಗೆ ಸಂಪರ್ಕ ಕಲ್ಪಿಸುವ ದಾರಿಗಳು ಕೂಡ ಕಿರಿದಾಗಿದ್ದು ಇವಕ್ಕೆ ಹೊಂದಿಕೊಂಡಂತೆ ಮನೆಗಳಿವೆ.
ಗ್ರಾಮದಲ್ಲಿ ಲಿಂಗಾಯತ, ಗೊಲ್ಲ, ಕುಂಚಿಟಿಗ, ಚಲವಾದಿ, ಭೋವಿ, ಮಡಿವಾಳ ಮತ್ತಿತರ ಸಮುದಾಯಗಳಿವೆ. ಬಹುತೇಕ ಬಡ ಕುಟುಂಬಗಳಿದ್ದು, ಕೃಷಿ, ಕೂಲಿ ಆಧರಿಸಿಯೇ ಜೀವನ ಸಾಗಿಸುತ್ತಿವೆ.
ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 1- 6ನೇ ತರಗತಿ ಇದ್ದು, 103 ಮಕ್ಕಳು ಕಲಿಯುತ್ತಿದ್ದಾರೆ. ಸರಿಯಾದ ಕೊಠಡಿಗಳಿಲ್ಲದೆ ಪಾಠ, ಪ್ರವಚನ ನಡೆಯುವುದೇ ಕಷ್ಟಕರ. ರಸ್ತೆ ಬದಿ ಇರುವ ಕಾರಣ ಮಕ್ಕಳು ಭಯದಿಂದ ಓಡಾಡಬೇಕಿದೆ. ಸೂಕ್ತ ಸ್ಥಳ ಗುರುತಿಸಿ ಶಾಲೆ ಸ್ಥಳಾಂತರ ಮಾಡಬೇಕಿದೆ ಎನ್ನುತ್ತಾರೆ ಎಚ್. ಶಿವಣ್ಣ, ಬಸಣ್ಣ, ಜಗಲೂರಪ್ಪ, ತಿಪ್ಪಣ್ಣ, ಹನುಮಜ್ಜ, ದ್ಯಾಮಣ್ಣ.
ಗುಡ್ಡಕ್ಕೆ ಗುದ್ದಿದ್ದರಿಂದ ಗ್ರಾಮಕ್ಕೆ ಹೆಸರು: ಗ್ರಾಮದ ಹೊರವಲಯದಲ್ಲಿ ಬನ್ನಿಮರ ಇದೆ. ಇಲ್ಲಿ ಸೋಮಲಿಂಗೇಶ್ವರ ದೇವಾಲಯ ಇತ್ತೆನ್ನಲಾದ ಜಾಗದ ಕಲ್ಲು ಗುಡ್ಡಕ್ಕೆ ಭಕ್ತ ನೊಬ್ಬ ಕೈಯಲ್ಲಿ ಗುದ್ದಿದ ಕಾರಣ ಊರಿಗೆ ಸೋಮಗುದ್ದು ಎಂದು ಹೆಸರು ಬಂದ ಪ್ರತೀತೀ ಇದೆ. ಈಗಲೂ ಸೋಮಲಿಂಗೇಶ್ವರ ದೇವಾಲಯ ಇದ್ದ ಜಾಗಕ್ಕೆ ಪ್ರತಿ ಸೋಮವಾರ ಪೂಜೆ ಸಲ್ಲಿಸುವ ವಾಡಿಕೆ ಇದೆ .
ವಿಶೇಷತೆ: ಈಶ್ವರ, ಆಂಜನೇಯ ಸ್ವಾಮಿ, ದುರುಗಮ್ಮ, ಬಸವಣ್ಣನ ದೇಗುಲಗಳಿದ್ದು, ಯುಗಾದಿ, ಮಾರಮ್ಮ ಹಬ್ಬ, ಕಾರ್ತಿಕೋತ್ಸವ ಆಚರಿಸಲಾಗುತ್ತದೆ. ಪಕ್ಕದ ಹೊಟ್ಟೆಪ್ಪನಹಳ್ಳಿ ಗ್ರಾಮದಿಂದ ಶ್ರೀ ಉಜ್ಜಿನಿ ಸಿದ್ದೇಶ್ವರ ದೇವರನ್ನು ಗ್ರಾಮಕ್ಕೆ ಕರೆತಂದು ಮೆರವಣಿಗೆ ಮಾಡಿ, ಗ್ರಾಮದ ಈಶ್ವರನ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಬಳಿಕ ಪೂಜಾ ಕಾರ್ಯಗಳನ್ನು ನೆರವೇರಿಸಿ ಮರಳಿ ಹೊಟ್ಟೆಪ್ಪನಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಡುವ ಸಂಪ್ರದಾಯ ಇಲ್ಲಿದೆ.
ಗ್ರಾಮಕ್ಕೆ ಏನು ಆಗಬೇಕು
* ನಿರಾಶ್ರಿತರು, ಬಡವರಿಗೆ ನಿವೇಶನ
* ಹೊಸ ಬಡಾವಣೆ ನಿರ್ಮಾಣ
* ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ವ್ಯವಸ್ಥೆ
* ರಂಗಮಂದಿರ ಸ್ಥಾಪನೆ
* ಎಸ್ಸಿ ಕಾಲನಿಯಲ್ಲಿ ರಸ್ತೆ ,ಚರಂಡಿ ನಿರ್ಮಾಣ
* ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಯ ಸ್ಥಳಾಂತರ
* ರೈಲ್ವೆ ಕೆಳಸೇತುವೆಯ ಮಾರ್ಗದ ಅಭಿವೃದ್ಧಿ
ಗ್ರಾಮದ ಹೊರಭಾಗದಲ್ಲಿ ಸೋಮಲಿಂಗೇಶ್ವರ ದೇವಾಲಯಕ್ಕೆ 20 ಎಕರೆ ಭೂಮಿ ಗುರುತಿಸಲಾಗಿದೆ. ಈ ಪೂಜನೀಯ ಜಾಗದಲ್ಲಿ ಸೋಮಲಿಂಗೇಶ್ವರ ದೇವಸ್ಥಾನ ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆ ಇದೆ. ಗ್ರಾಮ ಪ್ರವೇಶಿಸುವ ಬಳಿಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿದು ತೀವ್ರ ಸಮಸ್ಯೆ ಎದುರಿಸುತ್ತೇವೆ. ಈಗಾಗಲೇ ಈ ಸ್ಥಳದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಹೋರಾಟ ಕೂಡ ನಡೆದಿದೆ. ಆದರೂ, ರಸ್ತೆ ಅಭಿವೃದ್ಧಿ ಆಗುತ್ತಿಲ್ಲ.
ಸೋಮಗುದ್ದು ರಂಗಸ್ವಾಮಿ, ರೈತ ಸಂಘದ ಹೋರಾಟಗಾರರು.
ಗ್ರಾಮದ ಎಸ್ಸಿ ಕಾಲನಿಯಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಹರಿದು ಬರುವ ಕೊಚ್ಚೆ ನೀರಿನಿಂದ ಅನಾರೋಗ್ಯದ ಭೀತಿ ಹೆಚ್ಚಿದೆ. ಈ ಭಾಗದ ಜಾಲಿಗಿಡಗಳ ತೆರವು ಮತ್ತು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ತಾತ್ಕಾಲಿಕವಾಗಿ ಮಾಡುತ್ತಾರೆಯೇ ಹೊರತು ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ.
ಅಜ್ಜಣ್ಣ, , ಗ್ರಾಪಂ ಮಾಜಿ ಸದಸ್ಯ
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕೊಠಡಿ, ಅಡುಗೆ ಕೋಣೆ ವ್ಯವಸ್ಥೆ ಇರಲಿಲ್ಲ. ಇತ್ತೀಚೆಗಷ್ಟೆ ಕೊಠಡಿಗಳ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಸಮೀಪದ ಶಾಲೆಯನ್ನು ಮಕ್ಕಳ ಹಿತದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಲು ಸಂಬಂಧಿತ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ವಹಿಸಬೇಕು.
ಕೆ.ದ್ಯಾಮಣ್ಣ, ಶಾಲಾ ಸಮಿತಿ ಅಧ್ಯಕ್ಷ