ಚಳ್ಳಕೆರೆ ಸಂತೆ ಮೈದಾನ 'ಕೆಸರುಗದ್ದೆ': ಮಳೆ ನೀರು ದಾಟಿ ತರಕಾರಿ ಖರೀದಿಸುವ ಜನರ ಅನಿವಾರ್ಯತೆ; ನಿರ್ಲಕ್ಷ್ಯ ವಹಿಸಿದ ನಗರಸಭೆ

CLK Sante 12
Published on

ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆ

ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ, ನೆಹರೂ ವೃತ್ತದಿಂದ ಕೂಗಳತೆ ದೂರದಲ್ಲಿರುವ ಸಂತೆ ಮೈದಾನವು ಸಣ್ಣ ಮಳೆ ಬಂದರೂ ಸಂಪೂರ್ಣವಾಗಿ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದ್ದು, ಸಾರ್ವಜನಿಕರು ತಗ್ಗುಗಳಲ್ಲಿ ನಿಂತ ನೀರನ್ನು ದಾಟಿಕೊಂಡು ತರಕಾರಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ.

ಪ್ರತಿ ಭಾನುವಾರ ನಡೆಯುವ ಈ ಸಂತೆಯಿಂದ ನಗರಸಭೆಗೆ ವಾರ್ಷಿಕ 5.20 ಲಕ್ಷ ರೂ. ಜಕಾತಿ ವಸೂಲಾತಿಯಿಂದ ಆದಾಯವಿದ್ದರೂ, ಮೈದಾನದ ಮೂಲಭೂತ ಸೌಕರ್ಯಗಳ ಬಗ್ಗೆ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರ್ವಾಸನೆ ಮತ್ತು ಆರೋಗ್ಯದ ಆತಂಕ

  • ನೈರ್ಮಲ್ಯ ಕೊರತೆ: ಸಂತೆ ಆವರಣದಲ್ಲಿರುವ ಚರಂಡಿಗಳು ಸ್ವಚ್ಛತೆ ಇಲ್ಲದೆ ಕೊಳಕು ತುಂಬಿ ದುರ್ವಾಸನೆ ಬೀರುತ್ತಿವೆ.
  • ಆರೋಗ್ಯದ ಕಳವಳ: ಕೆಸರು ತುಂಬಿರುವ ಮೈದಾನದಲ್ಲಿ ಮಾರಾಟ ಮಾಡುವ ತರಕಾರಿ ಕೊಂಡೊಯ್ದು ಅಡುಗೆ ಮಾಡಿಕೊಂಡು ತಿನ್ನುವುದರ ಬಗ್ಗೆ ಗ್ರಾಹಕರಲ್ಲಿ ತೀವ್ರ ಕಳವಳವಿದೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ಸ್ಥಳೀಯ ಆಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಲೇ ವಾರದ ಸಂತೆ ಮುಗಿಸುತ್ತಿದ್ದಾರೆ.

ಕೇವಲ ಭರವಸೆ: ಶಾಶ್ವತ ಪರಿಹಾರಕ್ಕೆ ನಿರ್ಲಕ್ಷ್ಯ

ಸಮಸ್ಯೆ ಹೇಳಿಕೊಂಡರೆ, ನಗರಸಭೆ ಅಧಿಕಾರಿಗಳು ತಗ್ಗುಗಳಿಗೆ ತಾತ್ಕಾಲಿಕವಾಗಿ ಮಣ್ಣು ಹಾಕಿಸುವ ಕೆಲಸ ಮಾಡುತ್ತಾರೆ. ಆದರೆ, ಇದು ಸಮಸ್ಯೆಯನ್ನು ಇನ್ನೂ ಗಂಭೀರಗೊಳಿಸುತ್ತದೆಯೇ ಹೊರತು ಶಾಶ್ವತವಾಗಿ ಬಗೆಹರಿಸುತ್ತಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

"2 ಎಕರೆಯಷ್ಟಿರುವ ಸಂತೆ ಮೈದಾನಕ್ಕೆ ಇಂಟರ್‌ಲಾಕ್ ಸಿಸಿ ರಸ್ತೆ ನಿರ್ಮಾಣ, 2 ಹೈಮಾಸ್ಟ್ ದೀಪಗಳ ಅಳವಡಿಕೆ ಸೇರಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತೇವೆ" ಎಂದು ಜನಪ್ರತಿನಿಧಿಗಳು ಈ ಹಿಂದೆ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.

"ಸಂತೆ ಮೈದಾನದಲ್ಲಿ ಬೀಳುವ ಮಳೆ ನೀರು ಸರಾಗವಾಗಿ ಹೊರಗೆ ಹರಿದು ಹೋಗಲು ರಾಗಿ ಮಂಡಿಗಳ ಕಟ್ಟಡ ಅಡ್ಡಿಯಾಗಿದೆ. ಆದರೂ ಅಭಿವೃದ್ಧಿ ಕಾರ್ಯಕ್ಕೆ ಒತ್ತು ಕೊಡಲಾಗಿದೆ. ಈಗಾಗಲೇ ತಗ್ಗುಗಳಿಗೆ ಮಣ್ಣು ಹಾಕಿಸಲಾಗಿದೆ. ಇಲ್ಲಿನ ನಿರಂತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ಷೇತ್ರದ ಶಾಸಕರ ಜತೆ ಚರ್ಚಿಸಿ ಅನುಕೂಲ ಮಾಡಿಕೊಡುತ್ತೇವೆ." ಬಿ. ಶಿಲ್ಪಾ ಮುರುಳೀಧರ್, ಅಧ್ಯಕ್ಷೆ, ನಗರಸಭೆ, ಚಳ್ಳಕೆರೆ
 

"ಸಂತೆ ಮೈದಾನದಲ್ಲಿ ಈಗಾಗಲೇ 30 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಸಿಸಿ ರಸ್ತೆಗಳನ್ನು ಮಾಡಲಾಗಿದೆ. ಸಂಪೂರ್ಣ ಅಭಿವೃದ್ಧಿ ಮತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸುಮಾರು 5 ಕೋಟಿ ರೂ. ಅನುದಾನ ಬೇಕಾಗುತ್ತದೆ. ವ್ಯಾಪಾರಸ್ಥರಿಂದ ಕರ ವಸೂಲಾತಿ ಮಾಡಿಕೊಳ್ಳುವ ನಗರಸಭೆ ವತಿಯಿಂದ ಸೌಕರ್ಯ ಕಲ್ಪಿಸುವುದು ಅಗತ್ಯ. ಕೂಡಲೇ ಆಡಳಿತ ಹಂತದಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಸ್ತಾಪ ಮಾಡುತ್ತೇನೆ."

ಆರ್. ಮಂಜುಳಾ, 24ನೇ ವಾರ್ಡ್ ಸದಸ್ಯೆ, ಚಳ್ಳಕೆರೆ
 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net