

ಚಳ್ಳಕೆರೆ: ಸರ್ಕಾರಿ ನೇಮಕಾತಿಯಲ್ಲಿ ಮಾದಿಗ ಸಮುದಾಯದ ಸಂಖ್ಯೆ ಪ್ರಸ್ತುತ ಕ್ಷೀಣಿಸುತ್ತಿದ್ದು, ಈ ಸಮುದಾಯಕ್ಕೆ ನ್ಯಾಯ ಒದಗಿಸಲು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಮಾದಿಗ ಯುವ ಸೇನೆ ಉಪಾಧ್ಯಕ್ಷ ಬಿ.ರಾಜಪ್ಪ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ನೂರಕ್ಕೂ ಹೆಚ್ಚು ಜಾತಿಗಳು ಇರುವುದರಿಂದ ಮಾದಿಗ ಸಮುದಾಯಕ್ಕೆ ಉದ್ಯೋಗ ಪಡೆಯಲು ಕಷ್ಟವಾಗುತ್ತಿದೆ. ಈ ಸಮಸ್ಯೆ ಅರಿತಿದ್ದ ರಾಮಕೃಷ್ಣಹೆಗಡೆ ಮುಖ್ಯಮಂತ್ರಿ ಆಗಿದ್ದ ವೇಳೆ, 1983ರಿಂದ 1988 ಅವಧಿಯಲ್ಲಿ ಮಾದಿಗ ವಿದ್ಯಾವಂತರನ್ನು ವಿವಿಗಳಿಗೆ ನೇರ ನೇಮಕಾತಿ ಮಾಡಿಕೊಂಡಿದ್ದರು.
ಪಿಎಚ್.ಡಿ. ಸೇರಿ ಉನ್ನತ ವ್ಯಾಸಂಗ ಮಾಡಿದ ಪ್ರತಿಭಾನ್ವಿತರನ್ನು ಮುಖ್ಯಮಂತ್ರಿಗಳೇ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದರು. ಇದರಿಂದ ವಿಶ್ವವಿದ್ಯಾಲಯಗಳಲ್ಲಿ ಮಾದಿಗ ಸಮುದಾಯ ಉದ್ಯೋಗ ಪಡೆಯಲು ಸಾಧ್ಯವಾಗಿತ್ತು.
ಆದರೆ, ಅಂದಿನಿಂದ ಇಲ್ಲಿಯವರೆಗೂ ಈ ಸಾಮಾಜಿಕ ನ್ಯಾಯ ವ್ಯವಸ್ಥೆಯತ್ತ ಎಲ್ಲ ಮುಖ್ಯಮಂತ್ರಿಗಳು ನಿರ್ಲಕ್ಷೃ ವಹಿಸಿದ್ದು, ಇದರಿಂದ ಅಸ್ಪಶ್ಯ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ. ಆದ್ದರಿಂದ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ನಿಟ್ಟಿನಲ್ಲಿ ಕ್ರಮಕೈಗೊಂಡು ನಿರುದ್ಯೋಗ ವಿದ್ಯಾವಂತ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.