ಅನಾಥ ಮಕ್ಕಳ ಸಹಾಯಕ್ಕೆ ಬನ್ನಿ

CLK KALUVEHALLI 03
Published on

ಚಳ್ಳಕೆರೆ: ನಗರದ ಪಾವಗಡ ರಸ್ತೆಯಲ್ಲಿ ಭಾನುವಾರ ಲಾರಿ ಟೈರ್ ಸಿಡಿದು ಮೃತಪಟ್ಟ ಕಾಲುವೇಹಳ್ಳಿ ಗ್ರಾಮದ ದಂಪತಿ ಕುಟುಂಬಕ್ಕೆ ಸಂಘ ಸಂಸ್ಥೆಗಳು, ಸಮಾಜ ಕೈಲಾದಷ್ಟು ನೆರವು ನೀಡಬೇಕು ಎಂದು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮನವಿ ಮಾಡಿದರು.

ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ, ಅಪಘಾತದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥವಾದ ಆರು ಮಂದಿ ಮಕ್ಕಳನ್ನು ಸಂತೈಸಿ ಶ್ರೀಮಠ ಹಾಗೂ ಯಾದವ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ತಲಾ 10 ಸಾವಿರ ಹಾಗೂ ಯಾದವ ಯುವಕ ಸಂಘದ ಅಧ್ಯಕ್ಷ ಮಾರುತಿ ನೀಡಿದ 1500 ಸೇರಿ ಒಟ್ಟು 21,500 ರೂ. ಧನ ಸಹಾಯ ನೀಡಿ ಮಾತನಾಡಿದರು.

ಸತ್ತವರ ಮಕ್ಕಳಿಗೆ ಇದ್ದವರೇ ತಂದೆ ತಾಯಿಗಳೆಂಬ ಲೋಕರೂಢಿ ಮಾತಿನಂತೆ ನಾವೆಲ್ಲರೂ ನಡೆದುಕೊಳ್ಳಬೇಕಾಗಿದೆ. ಮಕ್ಕಳ ಶಿಕ್ಷಣಕ್ಕೆ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸೇವಕ ನಿಂಗಣ್ಣ, ಗ್ರಾಮದ ಮುಖಂಡ ಜಿ.ಟಿ.ರಂಗಸ್ವಾಮಿ, ಚೆಲುಮೆಸ್ವಾಮಿ ಮಠದ ಶ್ರೀ ಕಿರಣ್ ಸ್ವಾಮೀಜಿ, ಅಂಗನವಾಡಿ ಇಲಾಖೆ ಯೋಜನಾಧಿಕಾರಿ ಮೋಹನ್ ಕುಮಾರಿ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಕೆ.ವೀರಣ್ಣ, ಗ್ರಾಮಸ್ಥರಾದ ಬಿ.ತಿಪ್ಪೇಸ್ವಾಮಿ, ಕಲಾವಿದ ತಿಪ್ಪೇಸ್ವಾಮಿ, ಭೂತಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net