

ಚಳ್ಳಕೆರೆ: ರೈತರು ಸಾಲಕ್ಕೆ ಅಡವಿಟ್ಟ ಚಿನ್ನಾಭರಣಗಳ ಹರಾಜು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದ ಖಾಸಗಿ ಬ್ಯಾಂಕ್ ಒಂದರ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಚಟುವಟಿಕೆಗಾಗಿ ಬ್ಯಾಂಕುಗಳಲ್ಲಿ ಒಡವೆ ಅಡವಿಟ್ಟು ಸಾಲ ಪಡೆದ ರೈತರು, ಸತತ 15 ವರ್ಷದಿಂದ ವಾಡಿಕೆ ಮಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಬ್ಯಾಂಕಿನವರು ಪದೇ ಪದೆ ಸಾಲ ವಸೂಲಿಗಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ತಾಲೂಕನ್ನು ಐದಾರು ಬಾರಿ ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ, ರೈತರ ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ಕ್ರಮ ಕೈಗೊಂಡಿಲ್ಲ. ಕೃಷಿ ಚಟುವಟಿಕೆಗಳಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ದೇಶಕ್ಕೆ ಅನ್ನ ನೀಡುವ ರೈತರಿಗೆ ಜೀವನ ಭದ್ರತೆ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಬೆಳೆವಿಮೆ ಇತ್ಯಾದಿ ನೆಪವೊಡ್ಡಿ ಕೃಷಿಕರಿಂದಲೇ ಹಣ ಕಿತ್ತುಕೊಳ್ಳುತ್ತಿವೆ ಎಂದು ದೂರಿದರು.
ಕೃಷಿ ಸಾಲ ವಸೂಲಿಗೆ ಹಿಂಸೆ ಮಾಡುವ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಳೆ ಕೊರತೆಯಿಂದ ನಷ್ಟದಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬ್ಯಾಂಕುಗಳಲ್ಲಿ ಇಟ್ಟಿರುವ ಒಡವೆಗಳ ಮೇಲಿನ ಬಡ್ಡಿ ರಹಿತ ಸಾಲ ತೀರುವಳಿ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ತಾಲೂಕಾಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ಆರ್.ಬಸವರಾಜ, ಮಹಾಲಿಂಗಪ್ಪ, ಎಚ್.ಮಲ್ಲಿಕಾರ್ಜುನ, ಟಿ.ತಿಪ್ಪೇಸ್ವಾಮಿ, ಬಿ.ನಾಗರಾಜ, ಈರಣ್ಣ ಮತ್ತಿತರರಿದ್ದರು.