

ಚಳ್ಳಕೆರೆ: ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯದ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿರ್ವಹಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಂತುಹುಳು ಬಾಧೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯ ಇಲಾಖೆ ಸಲಹೆಯಂತೆ ಜಂತು ನಾಶಕ ಮಾತ್ರೆ ಕೊಡಿಸಿ ಆರೋಗ್ಯ ಕಾಪಾಡಬೇಕು ಎಂದು ತಿಳಿಸಿದರು.
ಟಿಎಚ್‌ಒ ಡಾ.ಎನ್. ಪ್ರೇಮಸುಧಾ ಮಾತನಾಡಿ, ಆರೋಗ್ಯ ಇಲಾಖೆ ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಣ ಇಲಾಖೆ ಸಹಕಾರ ಅತ್ಯಗತ್ಯ ಎಂದರು.
ಜಂತು ನಿವಾರಕ ಮಾತ್ರೆ ಬಳಕೆಯಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಇಲಾಖೆ ನಿರ್ದೇಶನದಂತೆ ಅಂಗನವಾಡಿ ಮಕ್ಕಳಿಗೆ ಅರ್ಧ ಮಾತ್ರೆ, ಶಾಲಾ ಮಕ್ಕಳಿಗೆ ಪೂರ್ಣ ಮಾತ್ರೆ ನೀಡಬೇಕು. ಮಾತ್ರೆ ಸೇವನೆ ಮಾಡಿದ ಮಕ್ಕಳನ್ನು ತಕ್ಷಣವೇ ಮನೆಗೆ ಕಳುಹಿಸದೆ ಕೆಲ ಕಾಲ ಅಂಗನವಾಡಿ ಮತ್ತು ಶಾಲೆಯಲ್ಲಿಯೇ ಉಳಿಸಿಕೊಳ್ಳಬೇಕು. ಈಗಾಗಲೇ 1 ಲಕ್ಷ ಮಾತ್ರೆಗಳನ್ನು ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮ್ಮಿ, ಸಿಡಿಪಿಒ ಮೋಹನ್ ಕುಮಾರಿ, ಪೌರಾಯುಕ್ತ ಪಾಲಯ್ಯ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಡಾ.ಕೆ.ಎಂ. ಜಯಕುಮಾರ್, ನಗರಸಭೆ ಸದಸ್ಯ ಬಿ.ಟಿ. ರಮೇಶ್‌ಗೌಡ, ಆರೋಗ್ಯ ಸಹಾಯಕ ಎಸ್.ಬಿ. ತಿಪ್ಪೇಸ್ವಾಮಿ ಮತ್ತಿತರರಿದ್ದರು.