ಶಾಸಕರು ಐದು ವರ್ಷ ಮೌನವಿದ್ದರು

CLK BJP
Published on

ಚಳ್ಳಕೆರೆ: ವೇದಾವತಿ ನದಿ ಪಾತ್ರಕ್ಕೆ 2015ರಲ್ಲೇ ವಿವಿ ಸಾಗರದ ನೀರು ಆದೇಶ ಪಡೆದುಕೊಂಡಿದ್ದ ಶಾಸಕ ರಘುಮೂರ್ತಿ, ಐದು ವರ್ಷ ಕಾಲ ಏಕೆ ಕಾರ್ಯಗತ ಮಾಡಲು ಮುಂದಾಗಲಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಪ್ರಶ್ನೀಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿ, ಸಕಾಲಕ್ಕೆ ಮಳೆ ಇಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ಇದ್ದ ಪರಿಸ್ಥಿತಿಗೆ ಪರಶುರಾಂಪುರ ಭಾಗದ ನೂರಾರು ರೈತರು ಪಾದಯಾತ್ರೆ ನಡೆಸಿದ್ದರಿಂದ ತಾಲೂಕು ನೀರಿನ ಭಾಗ್ಯ ಕಾಣಲು ಸಾಧ್ಯವಾಯಿತು ಎಂದು ಹೇಳಿದರು.

ಬರಪೀಡಿತ ಜಿಲ್ಲೆಯ ಜಲಾಶಯಗಳಿಗೆ ನೀರುಣಿಸಲು 2008ರಲ್ಲಿ ಬಿ.ಎಸ್.ಯಡಿಯೂರಪ್ಪ 500 ಕೋಟಿ ರೂ. ಅನುದಾನದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆಯ ಅನುಕೂಲದಂತೆ ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ನಿಗದಿ ಮಾಡಲಾಗಿತ್ತು.

ಆದರೆ, ಸಿದ್ದರಾಮಯ್ಯ ಆಡಳಿತದಲ್ಲಿ ಶಿರಾ ತಾಲೂಕಿನ ಟಿ.ಬಿ.ಜಯಚಂದ್ರ ಒತ್ತಡಕ್ಕೆ ಮಣಿದು ಹೊಸದುರ್ಗ ಮಾರ್ಗವಾಗಿ ತುಮಕೂರಿಗೆ 3 ಟಿಎಂಸಿ ಅಡಿ ನೀರು ವ್ಯವಸ್ಥೆ ಕಲ್ಪಿಸಿ, ವಿವಿ ಸಾಗರಕ್ಕೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಐದು ಜನ ಶಾಸಕರಿದ್ದರೂ ವಿವಿ ಸಾಗರಕ್ಕೆ 3 ಟಿಎಂಸಿ ಅಡಿ ನೀರು ಕಡಿಮೆ ಮಾಡಿದ್ದನ್ನು ಖಂಡಿಸಲಿಲ್ಲ ಎಂದು ದೂರಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಾಳೇಕಾಯಿ ರಾಮದಾಸ್, ಮುಖಂಡರಾದ ಬಿ.ಎಸ್.ಶಿವಪುತ್ರಪ್ಪ, ಪ್ರಸಾದ್, ದಿನೇಶ್‌ರೆಡ್ಡಿ, ಮಾತೃಶ್ರೀ ಮಂಜುನಾಥ್, ಮೋಹನ್‌ಕುಮಾರ್ ಮತ್ತಿತರರು ಇದ್ದರು.

ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್ ಹೇಳಿಕೆ: ವೇದಾವತಿ ನದಿಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ಕನಸಿನಂತೆ 2009-10ರಲ್ಲಿ ಹಾಲಿಗೊಂಡನಹಳ್ಳಿ ಮತ್ತು ಹರವಿಗೊಂಡನಹಳ್ಳಿ ಮತ್ತು ಚಟ್ಟೆಕಂಬ ಮತ್ತು ವೃಂದವನಹಳ್ಳಿ ಮಧ್ಯೆ ಬ್ಯಾರೆಜುಗಳನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದನ್ನು ಅನುಸರಿಸಿರುವ ಶಾಸಕ ರಘುಮೂರ್ತಿ ಮತ್ತೆರೆಡು ಬ್ಯಾರೇಜ್ ನಿರ್ಮಾಣ ಮಾಡಿ ವೇದಾವತಿ ನದಿಗೆ ನಾನೆ ಕಾಯಕಲ್ಪ ಕಲ್ಪಿಸಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ ಹೇಳಿಕೆ: ವಿವಿ ಸಾಗರ ಜಲಾಶಯದಿಂದ ವೇದಾವತಿಗೆ ನೀರು ಹರಿಯಲು ರೈತರ ಹೋರಾಟ, ಜಿಲ್ಲಾ ಸಚಿವರು, ಸಂಸದರ ಪಾತ್ರ ಇದೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಪ್ರಚಾರ ಪಡೆದುಕೊಳ್ಳುವುದು ಶಾಸಕರು ನಿಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net