

ಚಳ್ಳಕೆರೆ: ವೃದ್ಧರು, ಅಶಕ್ತರಿಗೆ ಸಕಾಲಕ್ಕೆ ಸಾಮಾಜಿಕ ಪಿಂಚಣಿ ತಲುಪಿಸುವ ಕೆಲಸ ಮಾಡಬೇಕು ಎಂದು ಅಂಚೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ಪ್ರಧಾನ ಅಂಚೆ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿ, ಲಾಕ್‌ಡೌನ್ ನೆಪ ಹೇಳಿಕೊಂಡು ವೃದ್ಧರನ್ನು ಅಲೆದಾಡಿಸುವ ಕೆಲಸ ಆಗಬಾರದು. ಕಚೇರಿ ಆವರಣದಲ್ಲಿ ವಿಶಾಲವಾದ ಜಾಗವಿದೆ. ಬರುವ ಜನರಿಗೆ ಟೋಕನ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಹೇಳಬೇಕು ಎಂದು ಹೇಳಿದರು.
ಮುಖಂಡ ಎಸ್.ಎಚ್.ಸೈಯದ್ ಮಾತನಾಡಿ, ಪಿಂಚಣಿ ನೀಡುವಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಲಾಕ್‌ಡೌನ್ ಜಾರಿಯಿಂದ ಫಲಾನುಭವಿಗಳು ಮತ್ತಷ್ಟು ಕಷ್ಟ ಅನುಭವಿಸಬೇಕಾಗಿದೆ. ಪಿಂಚಣಿದಾರರಿಗೆ ಪ್ರತಿ ಮಾಸಿಕ ಕೈಗೆ ತಲುಪುವುದಿಲ್ಲ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ತಾಲೂಕಿನಲ್ಲಿ 7285 ಅಂಗವಿಕಲರು, 11233 ವಿಧವೆಯರು, 3968 ವೃದ್ಧರು, 30168 ಸಂಧ್ಯಾ ಸುರಕ್ಷಾ, 1114 ಮನಸ್ವಿನಿ, 9 ಮೈತ್ರಿ ಫಲಾನುಭವಿಗಳು ಇದ್ದಾರೆ. ದೂರುಗಳನ್ನು ಆಧರಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.