ಕಲೆ, ಸಂಸ್ಕೃತಿ ಪೋಷಣೆ ಅಗತ್ಯ

Challakere, Nruthyaniketana, Anniversary, Challakere Habba,
Published on

ಚಳ್ಳಕೆರೆ: ವಿದ್ಯಾರ್ಥಿಗಳಲ್ಲಿ ಸಂಗೀತ ಮತ್ತು ಸಾಹಿತ್ಯದ ಹವ್ಯಾಸ ರೂಢಿಸುವ ಮೂಲಕ ನಾಡಿನ ಕಲೆ, ಸಂಸ್ಕೃತಿ ಪೋಷಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಟಿ. ರಘುಮೂರ್ತಿ ಸಲಹೆ ನೀಡಿದರು.

ನಗರದ ವಾಸವಿ ಮಹಲ್‌ನಲ್ಲಿ ಭಾನುವಾರ ರಾತ್ರಿ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರ ಹಮ್ಮಿಕೊಂಡಿದ್ದ 36ನೇ ವರ್ಷದ ಸಾಂಸ್ಕೃತಿಕ ಮಹೋತ್ಸವ- ಚಳ್ಳಕೆರೆ ಹಬ್ಬ ಉದ್ಘಾಟಿಸಿ ಮಾತನಾಡಿದರು.

ನೈಸರ್ಗಿಕ ಸಂಪನ್ಮೂಲಗಳ ಕೊರತೆಯುಳ್ಳ ತಾಲೂಕು ಆಗಿದ್ದರೂ ಕಲೆ ಮತ್ತು ಸಾಹಿತ್ಯ ಪ್ರತಿಭಾವಂತರ ಶ್ರೀಮಂತಿಕೆ ಹೊಂದಿದೆ. ಯುವ ಪ್ರತಿಭೆಗಳಲ್ಲಿ ಕಲಾವಂತಿಕೆ ರೂಢಿಸಬೇಕಿದೆ ಎಂದರು.

ಕಥೆಗಾರ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಸಮಾಜದ ಸೌಂದರ್ಯ ಅರ್ಥೈಸಿಕೊಳ್ಳಲು ಕಲೆಯ ಅರಿವಿರಬೇಕು. ಮಕ್ಕಳಲ್ಲಿ ಶಿಕ್ಷಣದ ಜತೆ ಅವರ ಹವ್ಯಾಸದಂತೆ ಸಂಗೀತ ಮತ್ತು ಕಲಾ ಪ್ರದರ್ಶನ ಪ್ರೋತ್ಸಾಹಿಸಬೇಕು. ಸ್ಥಳೀಯ ಪ್ರತಿಭಾವಂತರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತಿರುವ ನೃತ್ಯ ನಿಕೇತನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಯುವ ಕಲಾ ಪ್ರತಿಭೆ ಎಸ್.ಎಲ್. ರಶ್ಮಿತಾ ಅವರನ್ನು ಸನ್ಮಾನಿಸಲಾಯಿತು. ನಗರಸಭಾ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಜಿಪಂ ಮಾಜಿ ಅಧ್ಕಕ್ಷ ಟಿ. ರವಿಕುಮಾರ್, ಸಿಪಿಐ ಮುಖಂಡ ಸಿ.ವೈ. ಶಿವರುದ್ರಪ್ಪ, ಉಪನ್ಯಾಸಕಿ ಪುಷ್ಪಲತಾ, ನೃತ್ಯನಿಕೇತನ ಅಧ್ಯಕ್ಷ ಯು.ಎಸ್. ವಿಷ್ಣಮೂರ್ತಿರಾವ್, ಕಾರ್ಯದರ್ಶಿ ಸುಧಾಮೂರ್ತಿ, ಎಂ.ಎನ್. ಮೃತ್ಯುಂಜಯ, ಅರುಣಾ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net