ಚಳ್ಳಕೆರೆ ನಗರಸಭೆ ಅಧಿಕಾರ ಕಾಂಗ್ರೆಸ್‌ಗೆ

Challakere, Municipality, Election, Congress, Win,
Published on

ಚಳ್ಳಕೆರೆ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಬಿ.ಜಯಲಕ್ಷಿ ್ಮ ಅಧ್ಯಕ್ಷೆಯಾಗಿ, ಜೈತುನ್‌ಬಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಸನ್ನಕುಮಾರ್ ಘೋಷಿಸಿದರು.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಿ.ಬಿ.ಜಯಲಕ್ಷ್ಮಿ, ಜೆಡಿಎಸ್‌ನಿಂದ ನಿರ್ಮಲಾ, ಬಿಸಿಎಂಬಿ ಸ್ಥಾನದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಜೈತುನ್‌ಬಿ, ಬಿಜೆಪಿಯಿಂದ ಸಾಕಮ್ಮ ಸ್ಪರ್ಧೆ ಮಾಡಿದ್ದರು.

ಕಾಂಗ್ರೆಸ್‌ನ 16 ಸದಸ್ಯರ ಜತೆಗೆ ಶಾಸಕ ಟಿ.ರಘುಮೂರ್ತಿ ಮತ್ತು ಪಕ್ಷೇತರ ಅಭ್ಯರ್ಥಿ ರುದ್ರನಾಯ್ಕ ಬೆಂಬಲದಿಂದ 18 ಸಂಖ್ಯಾಬಲ ಪಡೆದರು. ಜೆಡಿಎಸ್ ಮತ್ತು ಬಿಜೆಪಿಗೆ ಜೆಡಿಎಸ್‌ನ 10, ಬಿಜೆಪಿ 4 ಸದಸ್ಯರ ಬೆಂಬಲ ಮಾತ್ರ ದೊರೆಯಿತು.

ಇತ್ತೀಚೆಗಷ್ಟೇ ನಡೆದ ತಾಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ನಗರಸಭಾ ಅಧಿಕಾರ ಗದ್ದುಗೆಗಾಗಿ ಕಣದಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಸಮಾಧಾನಗೊಂಡ ಕಾಂಗ್ರೆಸ್‌ನ ಇಬ್ಬರು ಸದಸ್ಯರ ಬೆಂಬಲ ಮತ್ತು ಜೆಡಿಎಸ್, ಸಂಸದ ಎ.ನಾರಾಯಣಸ್ವಾಮಿ ಅವರ ಮತದ ಸಹಾಯದಿಂದ ಗದ್ದುಗೆ ಏರಿ, ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪಿಸಲು ಬಿಜೆಪಿ ತಂತ್ರಗಾರಿಕೆ ರೂಪಿಸಿತ್ತು.

ಕಾನೂನು ಬಾಹಿರ: ಅಧ್ಯಕ್ಷರ ಚುನಾವಣೆ ನ. 2 ರಂದು ಪೂರೈಸುವಂತೆ ಹೈಕೋರ್ಟ್ ಆದೇಶಿಸಿತ್ತು. ಕಾನೂನು ಉಲ್ಲಂಘನೆ ಮಾಡಿ ನ. 3 ರಂದು ನಡೆಸಿರುವ ಚುನಾವಣೆ ಊರ್ಜಿತವಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುವುದಾಗಿ ಸದಸ್ಯರಾದ ಕೆ.ಸಿ.ನಾಗರಾಜ, ಸಿ.ಶ್ರೀನಿವಾಸ, ವಿ.ವೈ. ಪ್ರಮೋದ್, ಹೊಯ್ಸಳ ಗೋವಿಂದ, ಪ್ರಶಾಂತ್‌ಕುಮಾರ್ ಮತ್ತಿತರರು ತಿಳಿಸಿದರು.

ಅತ್ತೆ ಪೌರಕಾರ್ಮಿಕಳಾಗಿದ್ದ ನಗರಸಭೆಗೆ ಸೊಸೆ ಅಧ್ಯಕ್ಷೆ: ಗಾಂಧಿನಗರ ನಿವಾಸಿ ಶಾರದಮ್ಮ ಸುಮಾರು 35 ವರ್ಷ ಪೌರಕಾರ್ಮಿಕಳಾಗಿ ಸೇವೆ ಸಲ್ಲಿಸಿದ್ದ ನಗರಸಭೆಯಲ್ಲಿ ಅವರ ಸೊಸೆ ಸಿ.ಬಿ.ಜಯಲಕ್ಷಿ ್ಮ ಅಧ್ಯಕ್ಷೆಯಾಗಿ ಅಧಿಕಾರ ಹಿಡಿದಿದ್ದಾರೆ. ವಿಸ್ತಾರವಾಗಿ ಬೆಳೆಯುತ್ತಿರುವ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಇಂಗಿತ ಅಧ್ಯಕ್ಷರದು. ಸುಮಾರು 70 ಸಾವಿರ ಜನಸಂಖ್ಯೆ ಇರುವ ನಗರದಲ್ಲಿ ಕೋವಿಡ್ ನಿಯಂತ್ರಣ, ಸ್ವಚ್ಛತಾ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net